ಅಮೇರಿಕಾದ H-1B ವೀಸಾ ಆಯ್ಕೆ ವಿಧಾನದಲ್ಲಿ ದೊಡ್ಡ ಮಟ್ಟದ ಬದಲಾವಣೆ ಘೋಷಿಸಲಾಗಿದೆ. ಇದರಿಂದ ಭಾರತೀಯ ಐಟಿ ತಜ್ಞರು ಮತ್ತು ಅಮೆರಿಕಾದಲ್ಲಿರುವ ಭಾರತೀಯ ಮೂಲದ ಕುಟುಂಬಗಳು ನೇರವಾಗಿ ಪ್ರಭಾವಿತಗೊಳ್ಳುವ ಸಾಧ್ಯತೆ ಇದೆ.
ಅಮೆರಿಕಾದ Department of Homeland Security (DHS) ನೀಡಿರುವ ಹೊಸ ಅಧಿಸೂಚನೆಯ ಪ್ರಕಾರ, ಮುಂದಿನ ದಿನಗಳಲ್ಲಿ H-1B ಕ್ಯಾಪ್ ವೀಸಾ ಆಯ್ಕೆಯನ್ನು ಸಂಪೂರ್ಣ ಲಾಟರಿ ಆಧಾರದಿಂದ ದೂರ ಸರಿಸಲಾಗುತ್ತದೆ. ಇದರ ಬದಲು, ಅರ್ಜಿದಾರರ ಸಂಬಳ ಮಟ್ಟ (Wage Level) ಆಧಾರದ ಮೇಲೆ ಆಯ್ಕೆ ಮಾಡುವ Wage-based selection system ಜಾರಿಯಾಗಲಿದೆ.
ಈ ಹೊಸ ನಿಯಮದ ಮೂಲಕ, ಉನ್ನತ ಕೌಶಲ್ಯ, ಉತ್ತಮ ವಿದ್ಯಾರ್ಹತೆ ಮತ್ತು ಹೆಚ್ಚಿನ ಸಂಬಳ ಮಟ್ಟದ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವವರಿಗೆ ಆದ್ಯತೆ ಸಿಗುತ್ತದೆ ಎಂದು DHS ಸ್ಪಷ್ಟಪಡಿಸಿದೆ. ಅಮೆರಿಕನ್ ಉದ್ಯೋಗಿಗಳ ಸಂಬಳ, ಕೆಲಸದ ಪರಿಸ್ಥಿತಿ ಮತ್ತು ಉದ್ಯೋಗಾವಕಾಶಗಳನ್ನು ರಕ್ಷಿಸುವ ಉದ್ದೇಶವೂ ಈ ನಿಯಮಕ್ಕೆ ಅಡಿಪಾಯವಾಗಿದೆ.
H-1B ವೀಸಾ ಅರ್ಜಿದಾರರಲ್ಲಿ ಭಾರತೀಯರ ಪಾಲು ಅತ್ಯಂತ ಹೆಚ್ಚಿನದು. ವಿಶೇಷವಾಗಿ, ಅಮೆರಿಕಾದ ಗ್ರೀನ್ ಕಾರ್ಡ್ ವ್ಯವಸ್ಥೆಯಲ್ಲಿ ವರ್ಷಗಳ ಕಾಲ ಕಾದು ಕುಳಿತಿರುವ ಭಾರತೀಯ ವಲಸಿಗರು ಈ ಹೊಸ ಬದಲಾವಣೆಗಳನ್ನು ಆತಂಕದಿಂದಲೂ, ಕೆಲವು ಮಟ್ಟಿಗೆ ನಿರೀಕ್ಷೆಯಿಂದಲೂ ನೋಡುತ್ತಿದ್ದಾರೆ.
ಸಂಬಳ ಮಟ್ಟದ ಆಧಾರದ ಮೇಲೆ ನಡೆಯುವ ಆಯ್ಕೆ ಪ್ರಕ್ರಿಯೆ ಜಾರಿಯಾದರೆ,
ಕಡಿಮೆ ಸಂಬಳ ಮಟ್ಟದ ಎಂಟ್ರಿ-ಲೆವೆಲ್ ಐಟಿ ಉದ್ಯೋಗಿಗಳಿಗೆ ಅವಕಾಶಗಳು ಕಡಿಮೆಯಾಗಬಹುದಾದರೂ,
ಉನ್ನತ ಮಟ್ಟದ ನಿಪುಣ ತಜ್ಞರಿಗೆ ಹೆಚ್ಚಿನ ಅವಕಾಶಗಳು ದೊರೆಯುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಬದಲಾವಣೆ ಅಮೆರಿಕಾದ ಟೆಕ್ ಉದ್ಯೋಗ ಮಾರುಕಟ್ಟೆಗೆ ಹೊಸ ರೂಪು ನೀಡಬಹುದು ಎಂದು ವಲಸೆ ಅಧ್ಯಯನ ತಜ್ಞರು ತಿಳಿಸಿದ್ದಾರೆ.


