ಉಕ್ರೇನ್ ಶಾಂತಿ ಯೋಜನೆ ‘ಅಂತಿಮ ಆಫರ್ ಅಲ್ಲ’ – ಟ್ರಂಪ್ ಸ್ಪಷ್ಟನೆ

2 Min Read
2 Min Read

ಅಮೆರಿಕಾ – ರಷ್ಯಾ-ಉಕ್ರೇನ್ ಯುದ್ಧಕ್ಕೆ ಪರಿಹಾರ ಕಂಡುಹಿಡಿಯಲು ಅಮೆರಿಕ ಮುಂದಿರಿಸಿರುವ ಶಾಂತಿ ಯೋಜನೆ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಹೇಳಿಕೆ ನೀಡಿದ್ದಾರೆ. ಉಕ್ರೇನ್ ಗಾಗಿ ನೀಡಿರುವ ಯೋಜನೆ ‘ಕೊನೆಯ ಆಫರ್’ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಹೇಳಿಕೆ ಪಶ್ಚಿಮ ದೇಶಗಳ ಒಕ್ಕೂಟ ಟ್ರಂಪ್ ಪ್ರಸ್ತಾಪಕ್ಕೆ ತಿದ್ದುಪಡಿ ಅಗತ್ಯವೆಂದು ಹೇಳಿರುವ ಹಿನ್ನೆಲೆಯಲ್ಲಿ ಬಂದಿರುವುದು ರಾಜತಾಂತ್ರಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಅಮೆರಿಕಾ ಅಧ್ಯಕ್ಷ ಟ್ರಂಪ್, ವೈಟ್ ಹೌಸ್ ಹೊರಗಡೆ ಮಾತನಾಡುತ್ತಿದ್ದ ಅವರು, ಈ ತಿಂಗಳ 27ರೊಳಗೆ ಉಕ್ರೇನ್ ಈ ಯೋಜನೆಯನ್ನು ಒಪ್ಪಿಕೊಳ್ಳಲು ಒತ್ತಾಯಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್ಸ್ಕಿ, ತಮ್ಮ ದೇಶ ಇತಿಹಾಸದಲ್ಲಿಯೇ ಅತಿ ಕಠಿಣ ಸಮಯವನ್ನು ಎದುರಿಸುತ್ತಿದೆ ಎಂದು ತಿಳಿಸಿದ್ದಾರೆ. ಶಾಂತಿ ಯೋಜನೆ ರಷ್ಯಾಗೆ ಅನುಕೂಲಕರವಾಗಿ ಕಾಣುತ್ತಿದೆ ಎಂದು ಕೀವ್ ಸರ್ಕಾರ ಕಳವಳ ವ್ಯಕ್ತಪಡಿಸಿದೆ.

ಇತ್ತ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಟ್ರಂಪ್ ಯೋಜನೆ ಸಂಧಾನಕ್ಕೆ ಶ್ರೇಷ್ಠ ಅಡಿಪಾಯವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.


ಜಿನೀವಾದಲ್ಲಿ ಪ್ರಮುಖ ದೇಶಗಳ ಸಭೆ

ಇದರ ನಡುವೆಯೇ ಅಮೆರಿಕಾ, ಬ್ರಿಟನ್, ಫ್ರಾನ್ಸ್, ಜರ್ಮನಿ ಮತ್ತು ಉಕ್ರೇನ್‌ನ ಉನ್ನತ ಭದ್ರತಾ ಅಧಿಕಾರಿಗಳು ಇಂದು ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾದಲ್ಲಿ ಭೇಟಿ ಸಾಧ್ಯತೆ ಇದ್ದು, ಶಾಂತಿ ಯೋಜನೆಗೆ ಸೂಕ್ತ ತಿದ್ದುಪಡಿ ಮತ್ತು ಚರ್ಚೆ ನಡೆಸಲಿದ್ದಾರೆ.
ಸಭೆಯಲ್ಲಿ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರೂಬಿಯೊ ಮತ್ತು ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಗಫ್ ಭಾಗಿಯಾಗಲಿದ್ದಾರೆ. ಬ್ರಿಟನ್ ಪರವಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೊನಾಥನ್ ಪಾವೆಲ್ ಉಪಸ್ಥಿತರಿರಲಿದ್ದಾರೆ.


G20 ಶೃಂಗಸಭೆಯಲ್ಲಿ ಪಾಶ್ಚಾತ್ಯ ರಾಷ್ಟ್ರಗಳ ಪ್ರಮುಖ ಘೋಷಣೆ

ದಕ್ಷಿಣ ಆಫ್ರಿಕಾದಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಕೆನಡಾ, ಫಿನ್ಲೆಂಡ್, ಫ್ರಾನ್ಸ್, ಐರ್ಲೆಂಡ್, ಇಟಲಿ, ಜಪಾನ್, ನೆದರ್‌ಲ್ಯಾಂಡ್ಸ್, ಸ್ಪೇನ್, ಯುಕೆ, ಜರ್ಮನಿ, ನಾರ್ವೇ ಮತ್ತು ಯುರೋಪಿಯನ್ ಯೂನಿಯನ್ ಅಧಿಕಾರಿಗಳು ಒಕ್ಕೂಟದ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಅಮೆರಿಕದ ಕರಡು ಶಾಂತಿ ಯೋಜನೆ ಉತ್ತಮ ದಿಕ್ಕಾದರೂ, ಉಕ್ರೇನ್‌ಗೆ ಹೆಚ್ಚಿನ ಲಾಭವಾಗುವಂತೆ ತಿದ್ದುಪಡಿಗಳ ಅಗತ್ಯವಿದೆ ಎಂದು ಹೇಳಿಕೆ ಸ್ಪಷ್ಟಪಡಿಸಿದೆ.

ಯುದ್ಧದಿಂದಾಗಿ ಯೂರೋಪಿನ ಭದ್ರತೆ ಕುಂದಿರುವುದರಿಂದ ಉಕ್ರೇನ್ ಸಂಪ್ರಭುತ್ವ ಕಾಪಾಡುವಂತ ಪರಿಹಾರ ಬೇಕೆಂದು ಒತ್ತಾಯಿಸಲಾಗಿದೆ. ನಾರ್ಡಿಕ್ ಮತ್ತು ಬಾಲ್ಟಿಕ್ ರಾಷ್ಟ್ರಗಳು ಉಕ್ರೇನ್‌ಗೆ ಶಸ್ತ್ರಾಸ್ತ್ರ ಪೂರೈಕೆ ಮುಂದುವರಿಸುವುದಾಗಿ ಭರವಸೆ ನೀಡಿವೆ.

Share This Article
Leave a Comment