ದುಬೈ, ನ.17:
ಸಂಯುಕ್ತ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ಇಂದು ಆರಂಭವಾಗುತ್ತಿರುವ ದುಬೈ ಏರ್ ಶೋ 2025 ನಲ್ಲಿ ಭಾರತ ತನ್ನ ರಕ್ಷಣಾ ಸಾಮರ್ಥ್ಯ ಮತ್ತು ವೈಮಾನಿಕ ತಂತ್ರಜ್ಞಾನ ಶಕ್ತಿಯನ್ನು ಭರ್ಜರಿಯಾಗಿ ಪ್ರದರ್ಶಿಸಲು ಸಜ್ಜಾಗಿದೆ. ಎರಡು ದಿನ ನಡೆಯುವ ಈ ಅಂತರರಾಷ್ಟ್ರೀಯ ಏರ್ ಶೋನಲ್ಲಿ ಭಾರತೀಯ ವಾಯುಪಡೆ ಪ್ರಮುಖ ಆಕರ್ಷಣೆಯಾಗಲಿದ್ದು, ಅತ್ಯಾಧುನಿಕ ಎಲ್ಸಿಎ ತೇಜಸ್ ಯುದ್ಧವಿಮಾನ ಮತ್ತು ವಿಶ್ವಪ್ರಸಿದ್ಧ ಸೂರ್ಯಕಿರಣ ಏರೋಬ್ಯಾಟಿಕ್ ತಂಡ ಪ್ರದರ್ಶನ ನೀಡಲಿವೆ.
ರಕ್ಷಣಾ ರಾಜ್ಯ ಸಚಿವ ಶ್ರೀ ಸಂಜಯ್ ಸೇತ್ ಅವರು ಭಾರತೀಯ ಪ್ರತಿನಿಧಿ ಮಂಡಳಿಯನ್ನು ಮುನ್ನಡೆಸಲಿದ್ದಾರೆ. ಅವರು ತಮ್ಮ ಯುಎಇ ಪ್ರತಿನಿಧಿಯೊಂದಿಗೆ ದ್ವಿಪಕ್ಷೀಯ ರಕ್ಷಣಾ ಸಭೆ ನಡೆಸಿ, ತಂತ್ರಜ್ಞಾನ ವಿನಿಮಯ ಮತ್ತು ಸಹಕಾರ ಬಲಪಡಿಸುವ ಬಗ್ಗೆ ಚರ್ಚೆ ಮಾಡಲಿದ್ದಾರೆ.
ಇದೇ ವೇಳೆ, ಭಾರತ, ಯುಎಇ, ಆಸ್ಟ್ರೇಲಿಯಾ, ಅಮೆರಿಕಾ, ಬ್ರೆಜಿಲ್, ಯುಕೆ ಮತ್ತು ಇಟಲಿ ಸೇರಿದಂತೆ ಏಳು ದೇಶಗಳ ಸುಮಾರು 50 ಪ್ರಮುಖ ರಕ್ಷಣಾ ಹಾಗೂ ಏರೋಸ್ಪೇಸ್ ಕಂಪನಿಗಳೊಂದಿಗೆ ಉದ್ಯಮ ಚರ್ಚೆ ವಲಯ (Industry Round Table) ಸಭೆ ನಡೆಯಲಿದೆ. ಈ ಸಭೆಯ ಉದ್ದೇಶ ರಕ್ಷಣಾ ನಿರ್ಮಾಣ, ಸಂಶೋಧನೆ ಮತ್ತು ತಂತ್ರಜ್ಞಾನ ಸಹಕಾರವನ್ನು ಇನ್ನಷ್ಟು ವಿಸ್ತರಿಸುವುದು.
ದುಬೈ ಏರ್ ಶೋ ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ವಿಶ್ವದ ಪ್ರಮುಖ ವಿಮಾನಯಾನ ಪ್ರದರ್ಶನಗಳಲ್ಲಿ ಒಂದಾಗಿದೆ. ಈ ವರ್ಷ 1,000ಕ್ಕೂ ಹೆಚ್ಚು ಪ್ರದರ್ಶಕರು ಮತ್ತು 1.4 ಲಕ್ಷಕ್ಕೂ ಅಧಿಕ ಉದ್ಯಮ ತಜ್ಞರು ಭಾಗವಹಿಸುತ್ತಿದ್ದು, 150 ದೇಶಗಳಿಂದ ಜಾಗತಿಕ ಏರೋಸ್ಪೇಸ್ ಕ್ಷೇತ್ರದ ಮುಂಚೂಣಿ ಕಂಪನಿಗಳು ಉಪಸ್ಥಿತರಿವೆ.
ಭಾರತೀಯ ತಂಡದ ತೇಜಸ್ ಹಾಗೂ ಸುರ್ಯಕಿರಣ ತಂಡದ ಪ್ರದರ್ಶನಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ರಕ್ಷಣಾ ಸಾಮರ್ಥ್ಯ, ‘ಮೇಕ್ ಇನ್ ಇಂಡಿಯಾ’ ರಕ್ಷಣಾ ತಂತ್ರಜ್ಞಾನ ಮತ್ತು ಸ್ವದೇಶೀ ಯುದ್ಧವಿಮಾನಗಳ ಶಕ್ತಿಯನ್ನು ಜಗತ್ತಿಗೆ ಸಾರಲಿವೆ.


