ಕೀವ್(ಉಕ್ರೇನ್): ಶನಿವಾರ ತಡರಾತ್ರಿ ಉಕ್ರೇನ್ ಮೇಲೆ ರಷ್ಯಾ ಸೇನಾ ಪಡೆಗಳು ನಡೆಸಿದ ಕ್ಷಿಪಣಿ ಮತ್ತು ಡ್ರೋನ್ ದಾಳಿಯಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದು, 17 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ರಾಜಧಾನಿ ಕೀವ್ನಲ್ಲಿ ಶನಿವಾರ ಮುಂಜಾನೆ ನಡೆದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯಲ್ಲಿ ಒಬ್ಬರು ಸಾವನ್ನಪ್ಪಿದ್ದರೆ, ಹತ್ತು ಜನರು ಗಾಯಗೊಂಡಿದ್ದಾರೆ ಎಂದು ಕೀವ್ನ ನಗರದ ಮಿಲಿಟರಿ ಆಡಳಿತದ ಮುಖ್ಯಸ್ಥ ತಿಮೂರ್ ಟಕಾಚೆಂಕೊ ತಿಳಿಸಿದ್ದಾರೆ.
ಬ್ಯಾಲಿಸ್ಟಿಕ್ ದಾಳಿಗೆ ಒಳಗಾದ ಉಕ್ರೇನ್ ರಾಜಧಾನಿಯ ಕೆಲವು ಪ್ರದೇಶಗಳು: ಗಾಯಗೊಂಡವರಲ್ಲಿ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಒಂದು ಸ್ಥಳದಲ್ಲಿ ವಸತಿ ರಹಿತ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡರೆ, ತಡೆಹಿಡಿಯಲಾದ ಕ್ಷಿಪಣಿಗಳ ಅವಶೇಷಗಳು ಮತ್ತೊಂದು ಸ್ಥಳದಲ್ಲಿ ಬಿದ್ದಿವೆ. ಪರಿಣಾಮ ಹತ್ತಿರದ ಕಟ್ಟಡಗಳ ಕಿಟಕಿಗಳಿಗೆ ಹಾನಿಯಾಗಿದೆ ಎಂದು ಉಕ್ರೇನ್ನ ರಾಜ್ಯ ತುರ್ತು ಸೇವೆ ಟೆಲಿಗ್ರಾಮ್ನಲ್ಲಿ ಬರೆದಿದೆ. ಉಕ್ರೇನ್ ರಾಜಧಾನಿಯ ಕೆಲವು ಪ್ರದೇಶಗಳು ಬ್ಯಾಲಿಸ್ಟಿಕ್ ದಾಳಿಗೆ ಒಳಗಾಗಿವೆ ಎಂದು ಮೇಯರ್ ವಿಟಾಲಿ ಕ್ಲಿಟ್ಸ್ಕೊ ಟೆಲಿಗ್ರಾಮ್ನಲ್ಲಿ ಮಾಹಿತಿ ನೀಡಿದ್ದಾರೆ.
ಡ್ನಿಪ್ರೊಪೆಟ್ರೋವ್ಸ್ಕ್ ಪ್ರದೇಶದಲ್ಲಿ ನಡೆದ ಕ್ಷಿಪಣಿ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, 7 ಜನ ಗಾಯಗೊಂಡಿದ್ದಾರೆ ಎಂದು ಪ್ರಾದೇಶಿಕ ಗವರ್ನರ್ ವ್ಲಾಡಿಸ್ಲಾವ್ ಹೈವನೆಂಕೊ ಹೇಳಿದ್ದಾರೆ. ದಾಳಿಯಲ್ಲಿ ದೊಡ್ಡ ದೊಡ್ಡ ಅಪಾರ್ಟ್ಮೆಂಟ್, ಕಟ್ಟಡಗಳು, ಮನೆಗಳು, ಒಂದು ಔಟ್ಬಿಲ್ಡಿಂಗ್, ಒಂದು ಅಂಗಡಿ ಮತ್ತು ಒಂದು ವಾಹನ ಸೇರಿದಂತೆ ಅಪಾರ ಪ್ರಮಾಣದಲ್ಲಿ ಹಾನಿ ಆಗಿದೆ ಎಂದು ವ್ಲಾಡಿಸ್ಲಾವ್ ಹೈವನೆಂಕೊ ತಿಳಿಸಿದ್ದಾರೆ.
ರಷ್ಯಾ ತಡರಾತ್ರಿ ಒಂಬತ್ತು ಕ್ಷಿಪಣಿಗಳು ಮತ್ತು 62 ಡ್ರೋನ್ಗಳನ್ನು ಉಡಾಯಿಸಿದೆ ಎಂದು ಉಕ್ರೇನ್ನ ವಾಯುಪಡೆ ಹೇಳಿದೆ. ಅದರಲ್ಲಿ ವಾಯು ರಕ್ಷಣಾ ಪಡೆಗಳು ನಾಲ್ಕು ಕ್ಷಿಪಣಿಗಳು ಮತ್ತು 50 ಡ್ರೋನ್ಗಳನ್ನು ತಡೆಹಿಡಿದಿವೆ.
ಇನ್ನು ರಷ್ಯಾದ ವಾಯು ರಕ್ಷಣಾ ಪಡೆಗಳು ರಾತ್ರಿಯಿಡೀ 121 ಉಕ್ರೇನಿಯನ್ ಡ್ರೋನ್ಗಳನ್ನು ಹೊಡೆದುರುಳಿಸಿದವು ಎಂದು ರಷ್ಯಾದ ರಕ್ಷಣಾ ಸಚಿವಾಲಯ ವರದಿ ಮಾಡಿದೆ. ಕಳೆದ ರಾತ್ರಿ, ಕರ್ತವ್ಯದಲ್ಲಿದ್ದ ವಾಯು ರಕ್ಷಣಾ ವ್ಯವಸ್ಥೆಗಳು ಉಕ್ರೇನಿಯನ್ ವಿಮಾನ ಮಾದರಿಯ 121 ಮಾನವರಹಿತ ವೈಮಾನಿಕ ವಾಹನಗಳನ್ನು ತಡೆದು ನಾಶಪಡಿಸಿದವು ಎಂದು ಸಚಿವಾಲಯ ತಿಳಿಸಿದೆ.
ಲಂಡನ್ ಭೇಟಿಯ ಬೆನ್ನಲ್ಲೇ ದಾಳಿ: ತೈಲ ನಿರ್ಬಂಧವನ್ನು ರಷ್ಯಾದ ಎರಡು ತೈಲ ಕಂಪನಿಗಳ ಮೇಲೆ ಮಾತ್ರ ವಿಧಿಸಿದೆ. ಇದನ್ನು ಇನ್ನಷ್ಟು ವಿಸ್ತರಿಸಬೇಕು. ಜೊತೆಗೆ ರಷ್ಯಾದ ಮೇಲೆ ದಾಳಿ ಮಾಡಲು ದೀರ್ಘ ಶ್ರೇಣಿಯ ಕ್ಷಿಪಣಿ ನೀಡುವಂತೆ ಅಮೆರಿಕಕ್ಕೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲನ್ಸ್ಕಿ ಶುಕ್ರವಾರವಷ್ಟೇ ಮನವಿ ಮಾಡಿದ್ದರು. ಲಂಡನ್ನಲ್ಲಿ ಝೆಲನ್ಸ್ಕಿ ಜೊತೆ ಮಾತುಕತೆ ನಡೆಸಿರುವ ಯುರೋಪಿಯನ್ ನಾಯಕರು, ಮೂರು ವರ್ಷಗಳಿಂದ ಸಾಗುತ್ತಿರುವ ರಷ್ಯಾ – ಉಕ್ರೇನ್ ಯುದ್ಧವನ್ನು ನಿಲ್ಲಿಸುವುದು ಮತ್ತು ಭವಿಷ್ಯದಲ್ಲಿ ರಷ್ಯಾದ ಆಕ್ರಮಣವನ್ನು ತಡೆಯಲು ಉಕ್ರೇನ್ ಸೇನೆಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು. ಇದರ ಬೆನ್ನಲ್ಲೇ ಈ ದಾಳಿಗಳು ನಡೆದಿವೆ.


