ಷೇರು ಮಾರುಕಟ್ಟೆಯಲ್ಲಿ ವಹಿವಾಟಿನ ಅಂತಿಮ ಹಂತದ ನಿಯಮಗಳು ಹಾಗೂ ಡೆರಿವೇಟಿವ್ ಒಪ್ಪಂದಗಳ ಸೆಟಲ್ಮೆಂಟ್ ವಿಧಾನದಲ್ಲಿ ಭಾರತೀಯ ಷೇರುಪೇಟೆ ಮತ್ತು ವಿನಿಮಯ ಮಂಡಳಿ (SEBI) ಮಹತ್ವದ ಬದಲಾವಣೆಗಳನ್ನು ಪ್ರಕಟಿಸಿದೆ.
ಹೊಸ ಮಾರ್ಗಸೂಚಿಯ ಪ್ರಕಾರ, ಈಕ್ವಿಟಿ ಕ್ಯಾಶ್ ಮಾರುಕಟ್ಟೆಯ ಕ್ಲೋಸಿಂಗ್ ಆಕ್ಷನ್ ಸೆಷನ್ ಪ್ರತಿದಿನ ಮಧ್ಯಾಹ್ನ 3.30ರಿಂದ 3.40ರವರೆಗೆ ಒಟ್ಟು 10 ನಿಮಿಷ ನಡೆಯಲಿದೆ. ಈ ಅವಧಿಯಲ್ಲಿ ಉಲ್ಲೇಖಿತ ಬೆಲೆ ನಿರ್ಧಾರ ಮತ್ತು ಆರ್ಡರ್ಗಳನ್ನು ದಾಖಲಿಸುವ ಪ್ರಕ್ರಿಯೆಗಳಿಗೆ ಪ್ರತ್ಯೇಕ ಹಂತಗಳಿರಲಿವೆ. ಆರ್ಡರ್ ದಾಖಲಿಸುವ ಸಮಯವು ಮಧ್ಯಾಹ್ನ 3.38ರಿಂದ 3.40ರ ನಡುವಿನ ಯಾವುದಾದರೂ ಕ್ಷಣದಲ್ಲಿ ಅನಿರೀಕ್ಷಿತವಾಗಿ ಮುಕ್ತಾಯಗೊಳ್ಳಲಿದೆ.
ಷೇರು ಮತ್ತು ಸೂಚ್ಯಂಕ ಡೆರಿವೇಟಿವ್ಗಳ ವಹಿವಾಟು ಸಾಮಾನ್ಯ ದಿನಗಳಲ್ಲಿ ಮಧ್ಯಾಹ್ನ 3.45ರವರೆಗೆ ಮುಂದುವರಿಯಲಿದೆ. ಆದರೆ, ಅವಧಿ ಮುಕ್ತಾಯಗೊಳ್ಳುವ ದಿನದಂದು (ಎಕ್ಸ್ಪೈರಿ) ಮುಕ್ತಾಯಗೊಳ್ಳುತ್ತಿರುವ ಸೂಚ್ಯಂಕ ಡೆರಿವೇಟಿವ್ ಒಪ್ಪಂದಗಳ ವಹಿವಾಟು ಮಧ್ಯಾಹ್ನ 3.30ಕ್ಕೆ ಅಂತ್ಯಗೊಳ್ಳಲಿದೆ. ಷೇರು ಡೆರಿವೇಟಿವ್ಗಳ ವಹಿವಾಟು ಮಾತ್ರ 3.45ರವರೆಗೆ ನಡೆಯಲಿದೆ.
ಇನ್ನು, ಕ್ಯಾಶ್ ಮಾರುಕಟ್ಟೆಯ ಪೋಸ್ಟ್-ಕ್ಲೋಸಿಂಗ್ ಸೆಷನ್ ಸಂಜೆ 3.50ರಿಂದ 4 ಗಂಟೆಯವರೆಗೆ ನಡೆಯಲಿದ್ದು, ಈ ಅವಧಿಯ ವಹಿವಾಟುಗಳು ಅಂತಿಮ ಮುಕ್ತಾಯದ ಬೆಲೆಯಲ್ಲಿ ನಡೆಯಲಿವೆ.
ಎಕ್ಸ್ಪೈರಿ ದಿನದ ಸೆಟಲ್ಮೆಂಟ್ ಲೆಕ್ಕಾಚಾರದಲ್ಲೂ ಬದಲಾವಣೆ
ಎಕ್ಸ್ಪೈರಿ ದಿನದಂದು ಡೆರಿವೇಟಿವ್ ಒಪ್ಪಂದಗಳ ಸೆಟಲ್ಮೆಂಟ್ ಬೆಲೆ ಲೆಕ್ಕ ಹಾಕುವ ವಿಧಾನವನ್ನೂ SEBI ಪರಿಷ್ಕರಿಸಿದೆ. ಸೂಚ್ಯಂಕ ಡೆರಿವೇಟಿವ್ಗಳ ಸೆಟಲ್ಮೆಂಟ್ ಬೆಲೆಯನ್ನು ನಿರ್ಧರಿಸಲು, ನಿರಂತರ ವಹಿವಾಟಿನ ಕೊನೆಯ 30 ನಿಮಿಷಗಳಲ್ಲಿ ಸೂಚ್ಯಂಕದ ಘಟಕ ಷೇರುಗಳ ವಹಿವಾಟಿನ ಪ್ರಮಾಣಕ್ಕೆ ಅನುಗುಣವಾದ ಸರಾಸರಿ ಬೆಲೆಯನ್ನು (VWAP) ಆಧಾರವಾಗಿ ಬಳಸಲಾಗುತ್ತದೆ.
ಅದೇ ರೀತಿ, ಷೇರು ಡೆರಿವೇಟಿವ್ಗಳ ಸೆಟಲ್ಮೆಂಟ್ ಬೆಲೆಯನ್ನು ನಿರ್ಧರಿಸುವಾಗ ಸಂಬಂಧಿತ ಷೇರಿನ ಕೊನೆಯ 30 ನಿಮಿಷಗಳ ವಹಿವಾಟಿನ ಪ್ರಮಾಣಕ್ಕೆ ಅನುಗುಣವಾದ ಸರಾಸರಿ ಬೆಲೆಯನ್ನು ಪರಿಗಣಿಸಲಾಗುತ್ತದೆ.
ಕಾರ್ಯಗತಗೊಳಿಸದ ಆರ್ಡರ್ಗಳಿಗೂ ಹೊಸ ನಿಯಮ
ಕ್ಲೋಸಿಂಗ್ ಆಕ್ಷನ್ ಸೆಷನ್ಗೆ ವರ್ಗಾಯಿಸಲಾಗುವ ಕಾರ್ಯಗತಗೊಳಿಸದ ಆರ್ಡರ್ಗಳ ನಿರ್ವಹಣೆಗೂ SEBI ನಿಯಮಗಳನ್ನು ರೂಪಿಸಿದೆ. ಇದರಲ್ಲಿ ಐಸ್ಬರ್ಗ್ ಆರ್ಡರ್ಗಳಿಗೆ ಸಂಬಂಧಿಸಿದ ನಿಬಂಧನೆಗಳೂ ಸೇರಿವೆ. ನಿಗದಿತ ಷರತ್ತುಗಳಿಗೆ ಒಳಪಟ್ಟು, ಇಂತಹ ಆರ್ಡರ್ಗಳನ್ನು ಸಂಪೂರ್ಣ ವಿವರಗಳು ಬಹಿರಂಗವಾಗಿರುವ ಲಿಮಿಟ್ ಆರ್ಡರ್ಗಳಾಗಿ ಪರಿವರ್ತಿಸುವ ವ್ಯವಸ್ಥೆ ಇರಲಿದೆ.
ಕಾರ್ಯಗತಗೊಳಿಸದ ಆರ್ಡರ್ಗಳ ವರ್ಗಾವಣೆಗೆ ಸಂಬಂಧಿಸಿದ ನಿಯಮಗಳನ್ನು ಹೊರತುಪಡಿಸಿ, ಉಳಿದ ಪರಿಷ್ಕೃತ ನಿಯಮಗಳು 2026ರ ಡಿಸೆಂಬರ್ 7ರಿಂದ ಜಾರಿಗೆ ಬರಲಿವೆ. ಕಾರ್ಯಗತಗೊಳಿಸದ ಲಿಮಿಟ್ ಮತ್ತು ಐಸ್ಬರ್ಗ್ ಆರ್ಡರ್ಗಳಿಗೆ ಸಂಬಂಧಿಸಿದ ನಿಯಮಗಳು 2027ರ ಫೆಬ್ರವರಿ 8ರಿಂದ ಜಾರಿಗೆ ಬರಲಿವೆ.
ಹೊಸ ನಿಯಮಗಳಿಗೆ ಅನುಗುಣವಾಗಿ ಅಗತ್ಯ ತಾಂತ್ರಿಕ ವ್ಯವಸ್ಥೆ ಮತ್ತು ಕಾರ್ಯವಿಧಾನಗಳಲ್ಲಿ ಬದಲಾವಣೆಗಳನ್ನು ಕೈಗೊಳ್ಳುವಂತೆ SEBI ಷೇರು ವಿನಿಮಯ ಕೇಂದ್ರಗಳು ಹಾಗೂ ಕ್ಲಿಯರಿಂಗ್ ಕಾರ್ಪೊರೇಷನ್ಗಳಿಗೆ ಸೂಚಿಸಿದೆ. ನಿಯಂತ್ರಣ ಮಂಡಳಿಯೊಂದಿಗೆ ಸಮಾಲೋಚಿಸಿ, ಸುತ್ತೋಲೆ ಹೊರಡಿಸಿದ ಏಳು ದಿನಗಳೊಳಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ.


