ನವದೆಹಲಿ: ಪ್ರಧಾನ ಮಂತ್ರಿ ಆವಾಸ್ ಯೋಜನೆ–ನಗರ 2.0 (PMAY-U 2.0) ಅಡಿಯಲ್ಲಿ ಹೆಚ್ಚುವರಿಯಾಗಿ 1.93 ಲಕ್ಷಕ್ಕೂ ಅಧಿಕ ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಈ ಅನುಮೋದನೆಯೊಂದಿಗೆ ಯೋಜನೆಯಡಿ ಮಂಜೂರಾದ ಒಟ್ಟು ಮನೆಗಳ ಸಂಖ್ಯೆ 20 ಲಕ್ಷವನ್ನು ಮೀರಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ನವದೆಹಲಿಯಲ್ಲಿ ನಡೆದ ಕೇಂದ್ರ ಮಂಜೂರಾತಿ ಮತ್ತು ಮೇಲ್ವಿಚಾರಣಾ ಸಮಿತಿಯ 10ನೇ ಸಭೆಯ ಬಳಿಕ ಸಚಿವಾಲಯ ಈ ಮಾಹಿತಿ ಪ್ರಕಟಿಸಿದೆ. ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಸತ್ಯೇಂದ್ರ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ವಿವಿಧ ರಾಜ್ಯಗಳ ವಸತಿ ಪ್ರಸ್ತಾವನೆಗಳು ಹಾಗೂ ಯೋಜನೆಯ ಅನುಷ್ಠಾನದ ಕುರಿತು ಚರ್ಚಿಸಲಾಗಿದೆ.
ಆಂಧ್ರಪ್ರದೇಶ, ಬಿಹಾರ, ಛತ್ತೀಸ್ಗಢ, ಗುಜರಾತ್, ಕರ್ನಾಟಕ, ಮಿಜೋರಾಂ, ಒಡಿಶಾ, ಸಿಕ್ಕಿಂ, ತೆಲಂಗಾಣ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಈ ಮನೆಗಳಿಗೆ ಅನುಮೋದನೆ ದೊರೆತಿದೆ.
ಫಲಾನುಭವಿಗಳೇ ಮನೆ ನಿರ್ಮಿಸಿಕೊಳ್ಳುವ ಫಲಾನುಭವಿ ಆಧಾರಿತ ನಿರ್ಮಾಣ ವಿಭಾಗ ಹಾಗೂ ಸಹಭಾಗಿತ್ವದ ಮೂಲಕ ಕೈಗೆಟುಕುವ ದರದಲ್ಲಿ ಮನೆಗಳನ್ನು ಒದಗಿಸುವ ಕೈಗೆಟುಕುವ ವಸತಿ ಸಹಭಾಗಿತ್ವ ವಿಭಾಗಗಳ ಅಡಿಯಲ್ಲಿ ಈ ಅನುಮೋದನೆ ನೀಡಲಾಗಿದೆ. ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದ ಅರ್ಹ ನಗರ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ವಸತಿ ಪ್ರಸ್ತಾವನೆಗಳನ್ನು ನಿಗದಿತ ಸಮಯದಲ್ಲಿ ಸಲ್ಲಿಸುವುದು ಮತ್ತು ಅವುಗಳ ಪರಿಶೀಲನೆ ಹಾಗೂ ಅನುಮೋದನೆ ಪ್ರಕ್ರಿಯೆಯನ್ನು ತ್ವರಿತಗೊಳಿಸುವುದು ಅಗತ್ಯ ಎಂದು ಸಭೆಯಲ್ಲಿ ಕಾರ್ಯದರ್ಶಿ ಸತ್ಯೇಂದ್ರ ಸಿಂಗ್ ಒತ್ತಿಹೇಳಿದರು. ಇದಕ್ಕಾಗಿ ಕೇಂದ್ರ ಸಚಿವಾಲಯ, ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ನಡುವೆ ನಿಕಟ ಸಮನ್ವಯ ಇರಬೇಕು ಎಂದು ಅವರು ತಿಳಿಸಿದರು.


