ನವದೆಹಲಿ: ಭಾರತದ ಜವಳಿ ರಫ್ತು ಕ್ಷೇತ್ರವು ಉತ್ತಮ ಬೆಳವಣಿಗೆ ದಾಖಲಿಸಿದ್ದು, ಕಳೆದ ವರ್ಷದ ಆಗಸ್ಟ್ಗೆ ಹೋಲಿಸಿದರೆ ಈ ವರ್ಷದ ಆಗಸ್ಟ್ನಲ್ಲಿ ಜವಳಿ ರಫ್ತು ಶೇ.16.1ರಷ್ಟು ಏರಿಕೆಯಾಗಿದೆ ಎಂದು ಕೇಂದ್ರ ಜವಳಿ ಸಚಿವಾಲಯ ತಿಳಿಸಿದೆ.
ಆಗಸ್ಟ್ 2025ರಲ್ಲಿ ₹25,600 ಕೋಟಿಗೂ ಅಧಿಕವಾಗಿದ್ದ ಜವಳಿ ರಫ್ತು, ಆಗಸ್ಟ್ 2026ರಲ್ಲಿ ₹29,700 ಕೋಟಿಗೂ ಅಧಿಕಕ್ಕೆ ಏರಿಕೆಯಾಗಿದೆ.
ಇದೇ ವೇಳೆ, 2026ರ ಏಪ್ರಿಲ್ನಿಂದ ಆಗಸ್ಟ್ವರೆಗೆ ಐದು ತಿಂಗಳ ಅವಧಿಯಲ್ಲಿ ಭಾರತದ ಒಟ್ಟು ಜವಳಿ ರಫ್ತು ₹1,40,000 ಕೋಟಿಗೂ ಅಧಿಕವಾಗಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದು ಶೇ.10.3ರಷ್ಟು ಬೆಳವಣಿಗೆಯಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಜವಳಿ ಕ್ಷೇತ್ರದ ಸ್ಪರ್ಧಾತ್ಮಕತೆ ಹೆಚ್ಚಳ
ಜವಳಿ ರಫ್ತಿನ ಪ್ರಮುಖ ವಿಭಾಗಗಳಲ್ಲಿ ನಿರಂತರವಾಗಿ ಕಂಡುಬರುತ್ತಿರುವ ಬೆಳವಣಿಗೆಯು ಭಾರತದ ಜವಳಿ ಉತ್ಪನ್ನಗಳ ಸ್ಪರ್ಧಾತ್ಮಕತೆ ಮತ್ತು ವೈವಿಧ್ಯೀಕರಣ ಹೆಚ್ಚುತ್ತಿರುವುದನ್ನು ತೋರಿಸುತ್ತದೆ ಎಂದು ಸಚಿವಾಲಯ ಹೇಳಿದೆ.
ಸುಧಾರಿತ ಮಾರುಕಟ್ಟೆ ಪ್ರವೇಶ, ಸರ್ಕಾರದ ನೀತಿ ಕ್ರಮಗಳು, ಉತ್ಪನ್ನಗಳಿಗೆ ಹೆಚ್ಚಿನ ಮೌಲ್ಯವರ್ಧನೆ ಹಾಗೂ ಹೊಸ ಮಾರುಕಟ್ಟೆಗಳನ್ನು ಅನ್ವೇಷಿಸುವ ನಿರಂತರ ಪ್ರಯತ್ನಗಳು ರಫ್ತು ವೃದ್ಧಿಗೆ ನೆರವಾಗುತ್ತಿವೆ ಎಂದು ತಿಳಿಸಲಾಗಿದೆ.
ಭಾರತದ ಜವಳಿ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವುದು, ರಫ್ತು ವ್ಯಾಪ್ತಿಯನ್ನು ವಿಸ್ತರಿಸುವುದು ಹಾಗೂ ಉತ್ಪನ್ನಗಳ ಮೌಲ್ಯವರ್ಧನೆಗೆ ಒತ್ತು ನೀಡುವುದು ಮುಂದಿನ ದಿನಗಳಲ್ಲಿ ಪ್ರಮುಖ ಗುರಿಗಳಾಗಿವೆ ಎಂದು ಸಚಿವಾಲಯ ತಿಳಿಸಿದೆ.


