ವಿಶ್ವನಕ್ಷೆಯಲ್ಲಿ ಆಫ್ರಿಕಾದ ನೈಜ ಗಾತ್ರವನ್ನು ಹೆಚ್ಚು ನಿಖರವಾಗಿ ಪ್ರತಿಬಿಂಬಿಸುವ ಹೊಸ ನಕ್ಷೆ ಬಳಕೆಗೆ ವಿಶ್ವಸಂಸ್ಥೆ (ಯುಎನ್) ಮಹತ್ವದ ಹೆಜ್ಜೆ ಇಟ್ಟಿದೆ. ಸಾಂಪ್ರದಾಯಿಕ ಮರ್ಕೇಟರ್ ನಕ್ಷೆಯ ಬದಲಿಗೆ ಖಂಡಗಳ ನೈಜ ಗಾತ್ರವನ್ನು ಸಮರ್ಪಕವಾಗಿ ತೋರಿಸುವ ನಕ್ಷೆಯ ಬಳಕೆಯನ್ನು ಉತ್ತೇಜಿಸುವ ನಿರ್ಣಯಕ್ಕೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಬೆಂಬಲ ನೀಡಿದೆ.
164 ರಾಷ್ಟ್ರಗಳ ಬೆಂಬಲ
ಟೋಗೊ ಪ್ರಾಯೋಜಕತ್ವದಲ್ಲಿ ಹಾಗೂ ಆಫ್ರಿಕನ್ ಯೂನಿಯನ್ (AU) ಸದಸ್ಯ ರಾಷ್ಟ್ರಗಳ ಬೆಂಬಲದೊಂದಿಗೆ ಮಂಡಿಸಲಾದ ‘ಕರెక్ట್ ದಿ ಮ್ಯಾಪ್’ ನಿರ್ಣಯಕ್ಕೆ 164 ರಾಷ್ಟ್ರಗಳು ಮತ ಹಾಕಿವೆ. ಫ್ರಾನ್ಸ್ ಮತ್ತು ಬ್ರಿಟನ್ ಕೂಡ ನಿರ್ಣಯವನ್ನು ಬೆಂಬಲಿಸಿವೆ.
ಅಮೆರಿಕ ಮಾತ್ರ ನಿರ್ಣಯದ ವಿರುದ್ಧ ಮತ ಚಲಾಯಿಸಿದ್ದು, ಆರು ರಾಷ್ಟ್ರಗಳು ಮತದಾನದಿಂದ ದೂರ ಉಳಿದಿವೆ.
ಯುಎನ್ ಸಾಮಾನ್ಯ ಸಭೆಯ ಈ ನಿರ್ಣಯ ಕಡ್ಡಾಯ ಸ್ವರೂಪದ್ದಲ್ಲ. ಆದರೆ ಸರ್ಕಾರಗಳು, ಶಿಕ್ಷಣ ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳು ಸಾಂಪ್ರದಾಯಿಕ ಮರ್ಕೇಟರ್ ನಕ್ಷೆಯ ಬದಲಿಗೆ ಹೆಚ್ಚು ನಿಖರವಾದ ನಕ್ಷೆಗಳನ್ನು ಬಳಸಲು ಇದು ಪ್ರೇರಣೆ ನೀಡುವ ನಿರೀಕ್ಷೆಯಿದೆ.
ಆಫ್ರಿಕಾದ ಗಾತ್ರವನ್ನು ಕಡಿಮೆ ತೋರಿಸುವ ಮರ್ಕೇಟರ್ ನಕ್ಷೆ?
16ನೇ ಶತಮಾನದಿಂದ ವ್ಯಾಪಕವಾಗಿ ಬಳಕೆಯಲ್ಲಿರುವ ಮರ್ಕೇಟರ್ ನಕ್ಷೆ, ಭೂಮಿಯ ಮೇಲ್ಮೈಯನ್ನು ಎರಡು ಆಯಾಮಗಳಲ್ಲಿ ತೋರಿಸುವಾಗ ಉಂಟಾಗುವ ಭೌಗೋಳಿಕ ವಿಕೃತಿಯಿಂದಾಗಿ ಧ್ರುವ ಪ್ರದೇಶಗಳಲ್ಲಿರುವ ದೇಶಗಳನ್ನು ಅವುಗಳ ನೈಜ ಗಾತ್ರಕ್ಕಿಂತ ದೊಡ್ಡದಾಗಿ ತೋರಿಸುತ್ತದೆ.
ಇದರ ಪರಿಣಾಮವಾಗಿ ಆಫ್ರಿಕಾ ಮತ್ತು ಗ್ರೀನ್‌ಲ್ಯಾಂಡ್ ಒಂದೇ ರೀತಿಯ ಗಾತ್ರದಲ್ಲಿರುವಂತೆ ಕಾಣುತ್ತವೆ. ಆದರೆ ವಾಸ್ತವದಲ್ಲಿ ಆಫ್ರಿಕಾ ಗ್ರೀನ್‌ಲ್ಯಾಂಡ್‌ಗಿಂತ ಸುಮಾರು 14 ಪಟ್ಟು ದೊಡ್ಡದು. ಇಂತಹ ನಕ್ಷೆಗಳು ಸಮಭಾಜಕ ಪ್ರದೇಶದ ರಾಷ್ಟ್ರಗಳ ಅಭಿವೃದ್ಧಿ ಅಗತ್ಯಗಳು ಮತ್ತು ಸಾಮರ್ಥ್ಯದ ಕುರಿತು ಜನರ ಗ್ರಹಿಕೆಯನ್ನು ಪ್ರಭಾವಿಸಬಹುದು ಎಂಬುದು ಟೀಕಾಕಾರರ ವಾದ.
1569ರಲ್ಲಿ ರೂಪುಗೊಂಡ ಮರ್ಕೇಟರ್ ನಕ್ಷೆ
ಫ್ಲೆಮಿಷ್ ನಕ್ಷಾಶಾಸ್ತ್ರಜ್ಞ ಗೆರಾರ್ಡಸ್ ಮರ್ಕೇಟರ್ 1569ರಲ್ಲಿ ಈ ನಕ್ಷೆಯನ್ನು ರೂಪಿಸಿದ್ದರು. ವಿಶ್ವದ ವಿವಿಧ ಭಾಗಗಳಿಗೆ ಸಮುದ್ರಯಾನ ನಡೆಸುತ್ತಿದ್ದ ಯುರೋಪಿಯನ್ ನಾವಿಕರಿಗೆ ಮಾರ್ಗದರ್ಶನ ನೀಡುವ ಉದ್ದೇಶದಿಂದ ಈ ನಕ್ಷೆಯನ್ನು ವಿನ್ಯಾಸಗೊಳಿಸಲಾಗಿತ್ತು.
ಆದರೆ ಭೂಮಿಯ ಗೋಳಾಕಾರದ ಮೇಲ್ಮೈಯನ್ನು ಸಮತಟ್ಟಾದ ಕಾಗದದ ಮೇಲೆ ಸಂಪೂರ್ಣ ನಿಖರವಾಗಿ ಪ್ರತಿನಿಧಿಸಲು ಸಾಧ್ಯವಾಗದ ಕಾರಣ ನಕ್ಷೆಯಲ್ಲಿ ಗಾತ್ರದ ವ್ಯತ್ಯಾಸ ಉಂಟಾಗುತ್ತದೆ.
‘ಈಕ್ವಲ್ ಅರ್ಥ್’ ನಕ್ಷೆಗೆ ಒತ್ತು
ಈ ವಿಕೃತಿಯನ್ನು ಕಡಿಮೆ ಮಾಡುವ ಉದ್ದೇಶದಿಂದ 2018ರಲ್ಲಿ ನಕ್ಷಾಶಾಸ್ತ್ರಜ್ಞರ ತಂಡವೊಂದು ‘ಈಕ್ವಲ್ ಅರ್ಥ್ ಪ್ರೊಜೆಕ್ಷನ್’ ಎಂಬ ನಕ್ಷೆಯನ್ನು ಅಭಿವೃದ್ಧಿಪಡಿಸಿತು. ಇದು ಖಂಡಗಳ ಪರಸ್ಪರ ಗಾತ್ರವನ್ನು ಹೆಚ್ಚು ನಿಖರವಾಗಿ ತೋರಿಸುತ್ತದೆ.
ಈ ವರ್ಷದ ಫೆಬ್ರವರಿಯಲ್ಲಿ ಆಫ್ರಿಕನ್ ಯೂನಿಯನ್‌ನ 54 ಸದಸ್ಯ ರಾಷ್ಟ್ರಗಳು ಈ ನಕ್ಷೆಯನ್ನು ಅಳವಡಿಸಿಕೊಂಡು, ವಿಶೇಷವಾಗಿ ಆಫ್ರಿಕಾದ ನೈಜ ಗಾತ್ರವನ್ನು ಸಮರ್ಪಕವಾಗಿ ಪ್ರತಿನಿಧಿಸುತ್ತದೆ ಎಂದು ಹೇಳಿದ್ದವು.
‘ನ್ಯಾಯಯುತ ಜಗತ್ತಿಗೆ ನ್ಯಾಯಯುತ ನಕ್ಷೆ ಅಗತ್ಯ’
ನಿರ್ಣಯದ ಮತದಾನಕ್ಕೂ ಮುನ್ನ ಟೋಗೊ ವಿದೇಶಾಂಗ ಸಚಿವ ರಾಬರ್ಟ್ ಡಸ್ಸಿ ಮಾತನಾಡಿ, ನ್ಯಾಯಯುತ ಜಗತ್ತು ನ್ಯಾಯಯುತ ನಕ್ಷೆಯಿಂದ ಆರಂಭವಾಗುತ್ತದೆ ಎಂದು ಹೇಳಿದ್ದಾರೆ.
ನಕ್ಷೆಗಳು ಕೇವಲ ಭೌಗೋಳಿಕ ಮಾರ್ಗದರ್ಶಿಗಳಲ್ಲ. ಅವು ಜನರು ದೇಶಗಳು ಮತ್ತು ಖಂಡಗಳನ್ನು ಹೇಗೆ ಅರ್ಥೈಸಿಕೊಳ್ಳುತ್ತಾರೆ ಎಂಬುದರ ಮೇಲೂ ಪರಿಣಾಮ ಬೀರುತ್ತವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಫ್ರಾನ್ಸ್ ಕೂಡ ನಕ್ಷೆ ಬದಲಾವಣೆಯನ್ನು ಬೆಂಬಲಿಸಿದ್ದು, ಮರ್ಕೇಟರ್ ನಕ್ಷೆಯ ಬಳಕೆಯನ್ನು ನಿಲ್ಲಿಸುವ ಯೋಜನೆ ಹೊಂದಿರುವುದಾಗಿ ತಿಳಿಸಿದೆ. ಆದರೆ ಅಮೆರಿಕ ಯುಎನ್ ನಿರ್ಣಯವನ್ನು ಟೀಕಿಸಿದ್ದು, ಸಾಮಾನ್ಯ ಸಭೆ ಇನ್ನಷ್ಟು ಗಂಭೀರ ಜಾಗತಿಕ ಸಮಸ್ಯೆಗಳತ್ತ ಗಮನ ಹರಿಸಬೇಕು ಎಂದು ವಾದಿಸಿದೆ.
ನಕ್ಷೆಗಳು ಕೇವಲ ಪ್ರವಾಸಿಗರಿಗೆ ದಾರಿ ತೋರಿಸುವ ಸಾಧನಗಳಲ್ಲ; ಅವು ಪ್ರದೇಶಗಳ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಮಹತ್ವದ ಕುರಿತು ಜನರ ದೃಷ್ಟಿಕೋನವನ್ನು ರೂಪಿಸುವ ಸಾಮರ್ಥ್ಯ ಹೊಂದಿವೆ ಎಂದು ಅಭಿಯಾನಕಾರರು ಹೇಳಿದ್ದಾರೆ.


