ಮುಂಬೈ: ಭಾರತೀಯ ಷೇರುಪೇಟೆಯಲ್ಲಿ ಕುಸಿತದ ಸರಣಿ ಮುಂದುವರಿದಿದ್ದು, ಪ್ರಮುಖ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸತತ ನಾಲ್ಕನೇ ವಹಿವಾಟು ಅವಧಿಯಲ್ಲೂ ನಷ್ಟದೊಂದಿಗೆ ವಹಿವಾಟು ಮುಗಿಸಿವೆ.
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 417 ಅಂಕೆ ಅಥವಾ ಶೇ.0.5ಕ್ಕೂ ಹೆಚ್ಚು ಕುಸಿದು 76,153ಕ್ಕೆ ತಲುಪಿದೆ. ಮತ್ತೊಂದೆಡೆ, ನಿಫ್ಟಿ 41 ಅಂಕೆ ಅಥವಾ ಶೇ.0.2ರಷ್ಟು ಇಳಿಕೆ ಕಂಡು 23,873ರಲ್ಲಿ ವಹಿವಾಟು ಅಂತ್ಯಗೊಳಿಸಿದೆ.
ಆರಂಭದ ಚೇತರಿಕೆ ಉಳಿಸಿಕೊಳ್ಳಲು ವಿಫಲ
ಧನಾತ್ಮಕ ವಿದೇಶಿ ವಿನಿಮಯ ಒಳಹರಿವಿನಿಂದ ಹೂಡಿಕೆದಾರರಲ್ಲಿ ಆರಂಭಿಕವಾಗಿ ಉತ್ತಮ ಭಾವನೆ ಮೂಡಿತ್ತು. ಇದರ ಪರಿಣಾಮ ಷೇರುಪೇಟೆಗಳು ಇಂದು ಏರಿಕೆಯೊಂದಿಗೆ ವಹಿವಾಟು ಆರಂಭಿಸಿದವು.
ಆದರೆ, ವಹಿವಾಟಿನ ದ್ವಿತೀಯಾರ್ಧದಲ್ಲಿ ಈ ಏರಿಕೆಯನ್ನು ಮಾರುಕಟ್ಟೆಗಳು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕಚ್ಚಾ ತೈಲದ ಬೆಲೆಗಳ ಏರಿಕೆ ಹಾಗೂ ಜಾಗತಿಕ ಬಾಂಡ್ ಇಳುವರಿ ಹೆಚ್ಚಳ ಹೂಡಿಕೆದಾರರನ್ನು ಎಚ್ಚರಿಕೆಯ ಹೆಜ್ಜೆ ಇಡುವಂತೆ ಮಾಡಿತು.
ಟೈಟನ್, ಟ್ರೆಂಟ್, ಐಟಿಸಿ ಷೇರುಗಳಿಗೆ ಹೊಡೆತ
ಸೆನ್ಸೆಕ್ಸ್ ಸೂಚ್ಯಂಕದಲ್ಲಿರುವ 30 ಕಂಪನಿಗಳ ಪೈಕಿ 23 ಕಂಪನಿಗಳ ಷೇರುಗಳು ಕುಸಿತ ಕಂಡವು.
ನಷ್ಟ ಕಂಡ ಪ್ರಮುಖ ಷೇರುಗಳ ಪೈಕಿ ಟೈಟನ್ ಶೇ.2.2, ಟ್ರೆಂಟ್ ಶೇ.1.9 ಹಾಗೂ ಐಟಿಸಿ ಶೇ.1.6ರಷ್ಟು ಇಳಿಕೆ ಕಂಡವು.
ಇದಕ್ಕೆ ವಿರುದ್ಧವಾಗಿ ಆಕ್ಸಿಸ್ ಬ್ಯಾಂಕ್ ಶೇ.0.9, ಅದಾನಿ ಪೋರ್ಟ್ಸ್ ಶೇ.0.8 ಹಾಗೂ ಏಷ್ಯನ್ ಪೇಂಟ್ಸ್ ಶೇ.0.5ರಷ್ಟು ಏರಿಕೆ ದಾಖಲಿಸಿವೆ.
ರಿಯಾಲ್ಟಿ ಕ್ಷೇತ್ರಕ್ಕೆ ಉತ್ತಮ ಬೆಂಬಲ
ಬಿಎಸ್‌ಇಯ ವಲಯವಾರು ಸೂಚ್ಯಂಕಗಳಲ್ಲಿ 28 ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳು ಏರಿಕೆ ಕಂಡವು.
ಇವುಗಳಲ್ಲಿ ರಿಯಾಲ್ಟಿ ಸೂಚ್ಯಂಕ ಶೇ.2.4ರಷ್ಟು ಏರಿಕೆಯಾಗಿ ಮುಂಚೂಣಿಯಲ್ಲಿತ್ತು. ಹೌಸಿಂಗ್ ಫೈನಾನ್ಸ್ ಮತ್ತು ಕ್ಯಾಪಿಟಲ್ ಗೂಡ್ಸ್ ವಲಯಗಳು ತಲಾ ಸುಮಾರು ಶೇ.1ರಷ್ಟು ಹಾಗೂ ಮಿಡ್-ಸ್ಮಾಲ್ ಪ್ರೈವೇಟ್ ಬ್ಯಾಂಕ್ ಸೂಚ್ಯಂಕ ಶೇ.0.9ರಷ್ಟು ಏರಿಕೆ ಕಂಡವು.
ಮತ್ತೊಂದೆಡೆ, ಐಟಿ ಶೇ.1, ಕನ್ಸ್ಯೂಮರ್ ಡ್ಯೂರಬಲ್ಸ್ ಶೇ.0.6 ಹಾಗೂ ಆಟೋ ವಲಯ ಶೇ.0.5ರಷ್ಟು ಕುಸಿದವು.
ಬಿಎಸ್‌ಇಯಲ್ಲಿ ಒಟ್ಟಾರೆ ವಹಿವಾಟಿನ ಚಿತ್ರಣ
ಬಿಎಸ್‌ಇಯ ಒಟ್ಟಾರೆ ಮಾರುಕಟ್ಟೆ ವಿಸ್ತಾರ ಧನಾತ್ಮಕವಾಗಿತ್ತು. ಒಟ್ಟು 2,545 ಕಂಪನಿಗಳ ಷೇರುಗಳು ಏರಿಕೆ ಕಂಡರೆ, 1,778 ಕಂಪನಿಗಳ ಷೇರುಗಳು ಕುಸಿದವು. ಇನ್ನೂ 223 ಕಂಪನಿಗಳ ಷೇರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.


