ಇಂಫಾಲ್: ತಮ್ಮ ಬೇಡಿಕೆಗಳು ಹಾಗೂ ಅಹವಾಲುಗಳನ್ನು ವ್ಯಕ್ತಪಡಿಸಲು ಬಂದ್ ಅಥವಾ ರಸ್ತೆ ತಡೆಗೆ ಕರೆ ನೀಡುವುದನ್ನು ತಪ್ಪಿಸುವಂತೆ ಮಣಿಪುರ ಮುಖ್ಯಮಂತ್ರಿ ಯುಮ್ನಂ ಖೇಮಚಂದ್ ಸಿಂಗ್ ಅವರು ರಾಜ್ಯದ ಎಲ್ಲ ವರ್ಗದ ಜನರಿಗೆ ಮನವಿ ಮಾಡಿದ್ದಾರೆ.
ಬಂದ್ ಮತ್ತು ರಸ್ತೆ ತಡೆಗಳಿಂದ ಕೆಲವೊಮ್ಮೆ ಅನಗತ್ಯ ಹಿಂಸಾತ್ಮಕ ಘಟನೆಗಳು ಸಂಭವಿಸುವ ಸಾಧ್ಯತೆ ಇದ್ದು, ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತದೆ. ಹೀಗಾಗಿ ತಮ್ಮ ಬೇಡಿಕೆಗಳಿಗಾಗಿ ಪ್ರಜಾಸತ್ತಾತ್ಮಕವಾಗಿ ಪ್ರತಿಭಟನೆ ನಡೆಸಲು ಪರ್ಯಾಯ ಮಾರ್ಗಗಳನ್ನು ಅನುಸರಿಸುವಂತೆ ಅವರು ಕರೆ ನೀಡಿದ್ದಾರೆ.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಣಿಪುರದ ಜನರ ಆಶಯಗಳನ್ನು ಈಡೇರಿಸಲು ಬದ್ಧವಾಗಿವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಬಂದ್‌ಗಳಿಂದ ಯಾವುದೇ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುವುದಿಲ್ಲ. ಬದಲಾಗಿ ಜನಸಾಮಾನ್ಯರ ದೈನಂದಿನ ಬದುಕಿಗೆ ತೊಂದರೆಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ದಿನಗೂಲಿ ಕಾರ್ಮಿಕರು, ವಿದ್ಯಾರ್ಥಿಗಳಿಗೆ ಹೆಚ್ಚು ಸಂಕಷ್ಟ
ಬಂದ್ ಸಂದರ್ಭದಲ್ಲಿ ದಿನಗೂಲಿ ಕಾರ್ಮಿಕರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಕಷ್ಟಕ್ಕೆ ಒಳಗಾಗುತ್ತಾರೆ ಎಂದು ಖೇಮಚಂದ್ ಸಿಂಗ್ ತಿಳಿಸಿದ್ದಾರೆ.
ವಿಶೇಷವಾಗಿ ಮಹಿಳಾ ತರಕಾರಿ ವ್ಯಾಪಾರಿಗಳು ಬಂದ್‌ನಿಂದ ತೀವ್ರ ತೊಂದರೆ ಅನುಭವಿಸುತ್ತಾರೆ. ಅವರ ವ್ಯಾಪಾರ ಹಾಗೂ ದುಡಿಮೆಗೆ ಅಡ್ಡಿಯಾದರೆ, ಅದರ ಪರಿಣಾಮ ಕುಟುಂಬದ ಜೀವನೋಪಾಯದ ಮೇಲೂ ಬೀರುತ್ತದೆ ಎಂದು ಅವರು ಹೇಳಿದ್ದಾರೆ.
ಕಾನೂನು ಉಲ್ಲಂಘಿಸಿ ಅಶಾಂತಿ ಅಥವಾ ಗೊಂದಲದ ವಾತಾವರಣ ಸೃಷ್ಟಿಸಲು ಯತ್ನಿಸುವ ಪ್ರತಿಭಟನಾಕಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕರ ಹಿತ ಹಾಗೂ ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ, ಯಾವುದೇ ಸಮಸ್ಯೆಯನ್ನು ಪ್ರಜಾಸತ್ತಾತ್ಮಕ ಮತ್ತು ಶಾಂತಿಯುತ ಮಾರ್ಗಗಳ ಮೂಲಕ ಪರಿಹರಿಸಿಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.


