ರಾಯಚೂರು: ಭವಿಷ್ಯದ ಚಿನ್ನದ ಗಣಿಗಾರಿಕೆ ಯೋಜನೆಗಳಲ್ಲಿ ಕರ್ನಾಟಕದ ಹಟ್ಟಿ ಗೋಲ್ಡ್ ಮೈನ್ಸ್ ಜತೆ ಜಂಟಿ ಸಹಭಾಗಿತ್ವ (Joint Venture) ಸ್ಥಾಪಿಸುವ ಸಾಧ್ಯತೆಯನ್ನು ಪರಿಶೀಲಿಸುವಂತೆ ತೆಲಂಗಾಣ ಉಪಮುಖ್ಯಮಂತ್ರಿ ಭಟ್ಟಿ ವಿಕ್ರಮಾರ್ಕ ಅವರು ಸಿಂಗರೆಣಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕರ್ನಾಟಕದ ರಾಯಚೂರು ಜಿಲ್ಲೆಯಲ್ಲಿ ಹಟ್ಟಿ ಮತ್ತು ಯುಟಿಐ ಚಿನ್ನದ ಗಣಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಈ ಸೂಚನೆ ನೀಡಿದ್ದಾರೆ. ಪ್ರದೇಶ ಪ್ರವಾಸದ ಎರಡನೇ ದಿನದಂದು ಗಣಿಗಳಿಗೆ ಭೇಟಿ ನೀಡಿದ ಉಪಮುಖ್ಯಮಂತ್ರಿಯವರು, ಎರಡೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ತಾಂತ್ರಿಕ ಪರಿಣತಿಯನ್ನು ಒಗ್ಗೂಡಿಸುವ ಮೂಲಕ ದೇಶೀಯ ಚಿನ್ನದ ಉತ್ಪಾದನೆಯನ್ನು ಹೆಚ್ಚಿಸಬಹುದು ಎಂದು ಅಭಿಪ್ರಾಯಪಟ್ಟರು.
ತಾಂತ್ರಿಕ ಪರಿಣತಿ ಒಗ್ಗೂಡಿಸಲು ಸಲಹೆ
ಹಟ್ಟಿ ಗೋಲ್ಡ್ ಮೈನ್ಸ್‌ಗೆ ಚಿನ್ನದ ಅನ್ವೇಷಣೆ, ಗಣಿಗಾರಿಕೆ, ಸಂಸ್ಕರಣೆ ಮತ್ತು ಶುದ್ಧೀಕರಣ ಕ್ಷೇತ್ರಗಳಲ್ಲಿ ವ್ಯಾಪಕ ಅನುಭವವಿದೆ ಎಂದು ಭಟ್ಟಿ ವಿಕ್ರಮಾರ್ಕ ಹೇಳಿದರು.
ಇತ್ತ ಸಿಂಗರೆಣಿಗೆ ಕಲ್ಲಿದ್ದಲು ಹಾಗೂ ವಿವಿಧ ಖನಿಜಗಳ ಗಣಿಗಾರಿಕೆಯಲ್ಲಿ ಇರುವ ತಾಂತ್ರಿಕ ಪರಿಣತಿಯನ್ನು ಹಟ್ಟಿ ಗೋಲ್ಡ್ ಮೈನ್ಸ್‌ನ ಅನುಭವದೊಂದಿಗೆ ಸಂಯೋಜಿಸಿದರೆ, ದೇಶದ ಚಿನ್ನದ ಉತ್ಪಾದನೆಗೆ ಮತ್ತಷ್ಟು ಉತ್ತೇಜನ ನೀಡಬಹುದು ಎಂದು ಅವರು ಹೇಳಿದರು.
ದೇಶದ ಆರ್ಥಿಕ ಭದ್ರತೆಯಲ್ಲಿ ಚಿನ್ನ ಪ್ರಮುಖ ಪಾತ್ರ ವಹಿಸುತ್ತದೆ. ವಿದೇಶಿ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ದೇಶೀಯ ಚಿನ್ನದ ನಿಕ್ಷೇಪಗಳನ್ನು ವೈಜ್ಞಾನಿಕವಾಗಿ ಪತ್ತೆಹಚ್ಚಿ ಅಭಿವೃದ್ಧಿಪಡಿಸುವಲ್ಲಿ ಸರ್ಕಾರಿ ಸಂಸ್ಥೆಗಳು ಮುಂಚೂಣಿಯಲ್ಲಿ ಇರಬೇಕು ಎಂದು ಉಪಮುಖ್ಯಮಂತ್ರಿ ಒತ್ತಿಹೇಳಿದರು.
ಹಟ್ಟಿ ಗಣಿಯಲ್ಲಿ ಉತ್ಪಾದನಾ ಘಟಕಗಳ ಪರಿಶೀಲನೆ
ಭೇಟಿಯ ವೇಳೆ ಭಟ್ಟಿ ವಿಕ್ರಮಾರ್ಕ ಅವರು ಹಟ್ಟಿ ಗೋಲ್ಡ್ ಮೈನ್ಸ್‌ನ ಉತ್ಪಾದನಾ ಘಟಕ, ಖನಿಜ ಸಂಸ್ಕರಣಾ ಕೇಂದ್ರ ಮತ್ತು ಎಲೆಕ್ಟ್ರೋ-ವಿನ್ನಿಂಗ್ ಘಟಕಗಳನ್ನು ಪರಿಶೀಲಿಸಿದರು.
ಹಟ್ಟಿ ಯೋಜನೆಯಲ್ಲಿ ಪ್ರಸ್ತುತ ಪ್ರತಿದಿನ ಸುಮಾರು 2ರಿಂದ 4 ಕೆಜಿ ಚಿನ್ನ ಉತ್ಪಾದನೆಯಾಗುತ್ತಿದೆ ಎಂದು ಅಧಿಕಾರಿಗಳು ಅವರಿಗೆ ಮಾಹಿತಿ ನೀಡಿದರು.
ಬಳಿಕ ಅವರು ಯುಟಿಐನ ಮುಕ್ತ ಗಣಿಗಾರಿಕೆ ಮತ್ತು ಭೂಗತ ಚಿನ್ನದ ಗಣಿಗಳಿಗೆ ಭೇಟಿ ನೀಡಿ, ಗಣಿಗಾರಿಕೆ ತಂತ್ರಜ್ಞಾನ, ಖನಿಜ ಸಾಗಣೆ ವ್ಯವಸ್ಥೆ ಹಾಗೂ ಕಾರ್ಮಿಕರ ಸುರಕ್ಷತಾ ಕ್ರಮಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಸಿಂಗರೆಣಿ ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ಬುದ್ಧ ಪ್ರಕಾಶ್ ಜ್ಯೋತಿ ಸೇರಿದಂತೆ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿಯವರೊಂದಿಗೆ ಉಪಸ್ಥಿತರಿದ್ದರು.


