ಚೆನ್ನೈ: ಸ್ಕಾಟ್ಲೆಂಡ್ನ ಗ್ಲಾಸ್ಗೋದಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ 2026ರಲ್ಲಿ ವೇಟ್ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಕ್ರೀಡಾಪಟು ರಾಜಾ ಮುತ್ತುಪಾಂಡಿ ಅವರನ್ನು ನಟಿ ಸಿಮ್ರನ್ ಭೇಟಿಯಾಗಿ ಅಭಿನಂದಿಸಿದ್ದಾರೆ.
ರಾಜಾ ಮುತ್ತುಪಾಂಡಿ ಅವರ ಸಾಧನೆಯನ್ನು ಮೆಚ್ಚಿಕೊಂಡ ಸಿಮ್ರನ್, ಪ್ರತಿಷ್ಠಿತ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಭಾರತ ಹಾಗೂ ತಮಿಳುನಾಡಿಗೆ ಹೆಮ್ಮೆ ತಂದಿದ್ದಾರೆ ಎಂದು ಪ್ರಶಂಸಿಸಿದ್ದಾರೆ.
‘ತಮಿಳುನಾಡಿನ ಕ್ರೀಡಾಪಟು ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ’
ರಾಜಾ ಮುತ್ತುಪಾಂಡಿ ಅವರನ್ನು ಅಭಿನಂದಿಸಿದ ಸಿಮ್ರನ್, ಅವರ ಮುಂದಿನ ಕ್ರೀಡಾ ಪಯಣಕ್ಕೆ ಶುಭ ಹಾರೈಸಿದ್ದಾರೆ.
“ನಿಮ್ಮ ಈ ಗೆಲುವಿನ ಮೂಲಕ ಈಗಾಗಲೇ ಭಾರತ ಮತ್ತು ನಮ್ಮ ತಮಿಳುನಾಡಿಗೆ ಹೆಮ್ಮೆ ತಂದಿದ್ದೀರಿ. ನಮ್ಮದೇ ತಮಿಳುನಾಡಿನ ಒಬ್ಬ ಕ್ರೀಡಾಪಟು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಇಂತಹ ಮಹತ್ವದ ಸಾಧನೆ ಮಾಡಿರುವುದು ಇನ್ನಷ್ಟು ಸಂತೋಷ ಮತ್ತು ಹೆಮ್ಮೆಯ ವಿಷಯ. ಇದೇ ದೃಢನಿಶ್ಚಯ ಹಾಗೂ ಪರಿಶ್ರಮದೊಂದಿಗೆ ಮುಂದೆಯೂ ಹಲವು ಗೆಲುವುಗಳನ್ನು ದಾಖಲಿಸಿ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಇನ್ನಷ್ಟು ಪದಕಗಳನ್ನು ಗೆಲ್ಲಲಿ ಎಂದು ಹಾರೈಸುತ್ತೇನೆ,” ಎಂದು ಸಿಮ್ರನ್ ಹೇಳಿದ್ದಾರೆ.
2018ರ ಕಾಮನ್ವೆಲ್ತ್ ಗೇಮ್ಸ್ನಲ್ಲೂ ಭಾರತದ ಪರ ಸ್ಪರ್ಧೆ
ತಮಿಳುನಾಡಿನ ಕೋವಿಲ್ಪಟ್ಟಿ ಮೂಲದ ರಾಜಾ ಮುತ್ತುಪಾಂಡಿ ಈ ಹಿಂದೆ 2018ರ ಕಾಮನ್ವೆಲ್ತ್ ಗೇಮ್ಸ್ನಲ್ಲೂ ಭಾರತದ ತಂಡವನ್ನು ಪ್ರತಿನಿಧಿಸಿದ್ದರು.
ಗ್ಲಾಸ್ಗೋದಲ್ಲಿ ನಡೆದ 2026ರ ಕಾಮನ್ವೆಲ್ತ್ ಗೇಮ್ಸ್ ವೇಟ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಅವರು ಸ್ನ್ಯಾಚ್ ವಿಭಾಗದಲ್ಲಿ 126 ಕೆ.ಜಿ. ಹಾಗೂ ಕ್ಲೀನ್ ಅಂಡ್ ಜೆರ್ಕ್ ವಿಭಾಗದಲ್ಲಿ 160 ಕೆ.ಜಿ. ಭಾರ ಎತ್ತಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದರು.
ಅವರ ಈ ಸಾಧನೆಗೆ ಕ್ರೀಡಾಭಿಮಾನಿಗಳು ಹಾಗೂ ಗಣ್ಯರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.


