ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ವಲಸೆ ನೀತಿಯನ್ನು ಮತ್ತಷ್ಟು ಕಠಿಣಗೊಳಿಸುವ ನಿಟ್ಟಿನಲ್ಲಿ ವಿಶ್ವದಾದ್ಯಂತ ವಲಸೆ ವೀಸಾ ಅರ್ಜಿಗಳ ಪ್ರಕ್ರಿಯೆಗೆ ತಾತ್ಕಾಲಿಕ ತಡೆ ವಿಧಿಸಿದೆ ಎಂದು ವರದಿಯಾಗಿದೆ.
ಅಮೆರಿಕದ ಸ್ಟೇಟ್ ಡಿಪಾರ್ಟ್‌ಮೆಂಟ್ ವಲಸೆ ವೀಸಾ ಅರ್ಜಿದಾರರ ಪೈಕಿ ಅಮೆರಿಕದ ಸಾರ್ವಜನಿಕ ಕಲ್ಯಾಣ ಯೋಜನೆಗಳ ಮೇಲೆ ಅವಲಂಬಿತರಾಗುವ ಸಾಧ್ಯತೆ ಇರುವವರ ಪ್ರವೇಶವನ್ನು ನಿಯಂತ್ರಿಸುವ ಉದ್ದೇಶದಿಂದ ಪರಿಶೀಲನಾ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸುತ್ತಿದೆ ಎಂದು ವರದಿಗಳು ತಿಳಿಸಿವೆ.
ಸ್ಟೇಟ್ ಡಿಪಾರ್ಟ್‌ಮೆಂಟ್ ಅಧಿಕಾರಿಗಳನ್ನು ಉಲ್ಲೇಖಿಸಿರುವ ಮಾಧ್ಯಮ ವರದಿಗಳ ಪ್ರಕಾರ, ಇಂತಹ ಅರ್ಜಿಗಳನ್ನು ಸಮಗ್ರವಾಗಿ ಮತ್ತು ಏಕರೂಪದ ಮಾನದಂಡಗಳ ಆಧಾರದ ಮೇಲೆ ಪರಿಶೀಲಿಸಲು ಕಾನ್ಸುಲರ್ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ.
ಅಕ್ರಮ ವಲಸೆ ವಿರುದ್ಧ ಕ್ರಮ ಮತ್ತಷ್ಟು ಬಿಗಿ
ಅಮೆರಿಕದಲ್ಲಿ ಅಕ್ರಮ ವಲಸೆಯನ್ನು ನಿಯಂತ್ರಿಸುವ ಅಭಿಯಾನ ತೀವ್ರಗೊಂಡಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಇದರೊಂದಿಗೆ ಗ್ರೀನ್ ಕಾರ್ಡ್ ನೀಡುವ ನಿಯಮಗಳನ್ನೂ ಟ್ರಂಪ್ ಆಡಳಿತ ಮತ್ತಷ್ಟು ಕಠಿಣಗೊಳಿಸಿದೆ.
ಇದಕ್ಕೂ ಒಂದು ದಿನ ಮೊದಲು, H-1B ವೀಸಾ ಅರ್ಜಿಗೆ 1,03,265 ಅಮೆರಿಕನ್ ಡಾಲರ್ ಶುಲ್ಕ ವಿಧಿಸುವ ಪ್ರಸ್ತಾವನೆಯನ್ನು ಟ್ರಂಪ್ ಆಡಳಿತ ಮುಂದಿಟ್ಟಿತ್ತು ಎಂದು ವರದಿಯಾಗಿದೆ.
ಭಾರತೀಯರು ಸೇರಿದಂತೆ ವಿದೇಶಿ ಉದ್ಯೋಗಿಗಳ ಮೇಲೆ ಪರಿಣಾಮ?
H-1B ವೀಸಾ ವಲಸೆ ವೀಸಾದಿಂದ ಭಿನ್ನವಾದ ತಾತ್ಕಾಲಿಕ, ವಲಸೆರಹಿತ ವೀಸಾ ಆಗಿದ್ದು, ವಿಶೇಷ ಪರಿಣತಿ ಅಗತ್ಯವಿರುವ ಉದ್ಯೋಗಗಳಲ್ಲಿ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅಮೆರಿಕದ ಕಂಪನಿಗಳಿಗೆ ಅವಕಾಶ ನೀಡುತ್ತದೆ.
ತಾಂತ್ರಿಕ ಮತ್ತು ಸೈದ್ಧಾಂತಿಕ ಪರಿಣತಿ ಅಗತ್ಯವಿರುವ ಉದ್ಯೋಗಗಳಿಗೆ ವಿದೇಶಿ ಪ್ರತಿಭೆಗಳನ್ನು ನೇಮಿಸಿಕೊಳ್ಳಲು ಅಮೆರಿಕದ ತಂತ್ರಜ್ಞಾನ ಕಂಪನಿಗಳು H-1B ವೀಸಾ ವ್ಯವಸ್ಥೆಯನ್ನು ವ್ಯಾಪಕವಾಗಿ ಅವಲಂಬಿಸಿವೆ. ಭಾರತ ಮತ್ತು ಚೀನಾ ಸೇರಿದಂತೆ ವಿವಿಧ ದೇಶಗಳ ಸಾವಿರಾರು ಉದ್ಯೋಗಿಗಳು ಪ್ರತಿವರ್ಷ ಈ ವೀಸಾ ಮೂಲಕ ಅಮೆರಿಕದ ಕಂಪನಿಗಳಲ್ಲಿ ಕೆಲಸ ಪಡೆಯುತ್ತಾರೆ.
ಟ್ರಂಪ್ ಆಡಳಿತದ ಹೊಸ ವಲಸೆ ನೀತಿಗಳು ಜಾರಿಗೆ ಬಂದರೆ, ಅಮೆರಿಕದಲ್ಲಿ ಉದ್ಯೋಗ ಮತ್ತು ವಲಸೆ ಅವಕಾಶಗಳನ್ನು ಎದುರು ನೋಡುತ್ತಿರುವ ವಿದೇಶಿ ಅರ್ಜಿದಾರರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.


