ಕೇರಳದಲ್ಲಿ ತಿರು ಓಣಂ ಸಂಭ್ರಮ; ಮಹಾಬಲಿಯನ್ನು ಸ್ಮರಿಸಿ ಅದ್ಧೂರಿ ಆಚರಣೆ

2 Min Read
2 Min Read

ತಿರುವನಂತಪುರಂ: ಕೇರಳ ಸೇರಿದಂತೆ ವಿಶ್ವದ ವಿವಿಧೆಡೆ ನೆಲೆಸಿರುವ ಮಲಯಾಳಿಗಳು ಇಂದು ತಿರು ಓಣಂ ಹಬ್ಬವನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸುತ್ತಿದ್ದಾರೆ. ಓಣಂ ಹಬ್ಬದ ಅತ್ಯಂತ ಮಹತ್ವದ ದಿನವಾಗಿರುವ ತಿರು ಓಣಂ ಅಂಗವಾಗಿ ಕೇರಳದಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿದೆ.

ತಿರು ಓಣಂ ಆಚರಣೆಯ ಭಾಗವಾಗಿ ಮನೆಗಳ ಮುಂಭಾಗದಲ್ಲಿ ‘ಓಣ ಪೂಕ್ಕളം’ ಎಂದು ಕರೆಯಲಾಗುವ ಸಾಂಪ್ರದಾಯಿಕ ಹೂವಿನ ರಂಗೋಲಿಗಳನ್ನು ಹಾಕಲಾಗಿದ್ದು, ಪೌರಾಣಿಕ ರಾಜ ಮಹಾಬಲಿಯನ್ನು ಸ್ವಾಗತಿಸುವ ಸಂಪ್ರದಾಯವನ್ನು ಮುಂದುವರಿಸಲಾಗಿದೆ.

ಜಾತಿ, ಧರ್ಮದ ಭೇದವಿಲ್ಲದೆ ಕೇರಳೀಯರು ಒಗ್ಗಟ್ಟಿನಿಂದ ಆಚರಿಸುವ ಈ ಸುಗ್ಗಿ ಹಬ್ಬವು ಸೌಹಾರ್ದತೆ ಮತ್ತು ಸಹಬಾಳ್ವೆಯ ಪ್ರತೀಕವಾಗಿದೆ.

ದೇವಸ್ಥಾನಗಳಲ್ಲಿ ವಿಶೇಷ ಪೂಜೆ

ತಿರು ಓಣಂ ಹಿನ್ನೆಲೆಯಲ್ಲಿ ಕೇರಳದ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಶಬರಿಮಲೆ, ಆರಣ್ಮುಳ ಮತ್ತು ಗುರುವಾಯೂರು ಸೇರಿದಂತೆ ವಿವಿಧ ಪ್ರಸಿದ್ಧ ದೇವಾಲಯಗಳಲ್ಲಿ ಭಕ್ತರಿಗಾಗಿ ವಿಶೇಷ ಪೂಜಾ ವಿಧಿವಿಧಾನಗಳು ನಡೆಯುತ್ತಿವೆ.

ಓಣಂ ಹಬ್ಬದ ಪ್ರಮುಖ ಆಕರ್ಷಣೆಯಾಗಿರುವ ‘ಓಣ ಸದ್ಯ’ ಕೂಡ ಮನೆಮನೆಗಳಲ್ಲಿ ಹಾಗೂ ವಿವಿಧೆಡೆ ಸಿದ್ಧವಾಗುತ್ತಿದೆ. ಹಲವು ಬಗೆಯ ಸಾಂಪ್ರದಾಯಿಕ ಖಾದ್ಯಗಳನ್ನು ಒಳಗೊಂಡ ಈ ಭೋಜನ ಓಣಂ ಆಚರಣೆಯ ವಿಶೇಷತೆಯಾಗಿದೆ.

ಸಾಂಸ್ಕೃತಿಕ ಕಾರ್ಯಕ್ರಮ, ಸಾಂಪ್ರದಾಯಿಕ ಆಟಗಳಿಗೆ ಸಿದ್ಧತೆ

ಕೇರಳದಾದ್ಯಂತ ಇಂದು ಮಧ್ಯಾಹ್ನದಿಂದ ಸಾವಿರಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಾಂಪ್ರದಾಯಿಕ ಆಟೋಟಗಳು ನಡೆಯಲಿವೆ. ರಾಜ್ಯ ಸರ್ಕಾರದ ಅಧಿಕೃತ ಓಣಂ ಆಚರಣೆಗಳೂ ಇದರಲ್ಲಿ ಸೇರಿವೆ.

ಮಳೆಯ ನಡುವೆಯೂ ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಹಲವು ಕಡೆಗಳಲ್ಲಿ ಭಾರಿ ಜನದಟ್ಟಣೆ ಕಂಡುಬರುತ್ತಿದೆ.

ಪ್ರಧಾನಿ ಮೋದಿ, ಅಮಿತ್ ಶಾ ಶುಭಾಶಯ

ಓಣಂ ಹಬ್ಬದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ. ಸಾಮಾಜಿಕ ಜಾಲತಾಣದ ಸಂದೇಶದಲ್ಲಿ, ವಿಶ್ವದಾದ್ಯಂತ ಅತ್ಯಂತ ಉತ್ಸಾಹದಿಂದ ಆಚರಿಸಲಾಗುವ ಈ ರೋಮಾಂಚಕ ಹಬ್ಬವು ಸಂತೋಷ, ಒಗ್ಗಟ್ಟು ಮತ್ತು ಸಮೃದ್ಧಿಯ ಮನೋಭಾವವನ್ನು ಮತ್ತಷ್ಟು ಬಲಪಡಿಸಲಿ ಎಂದು ಹಾರೈಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಕೇರಳದ ಜನತೆಗೆ ಓಣಂ ಶುಭಾಶಯ ತಿಳಿಸಿದ್ದಾರೆ. ಈ ಸಂತಸದ ಹಬ್ಬವು ಎಲ್ಲರ ಜೀವನದಲ್ಲಿ ಶಾಂತಿ, ಸಮೃದ್ಧಿ ಮತ್ತು ಉತ್ತಮ ಆರೋಗ್ಯದಿಂದ ಕೂಡಿದ ವರ್ಷವನ್ನು ತರಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

Share This Article