ದೇಶದ ವಿವಿಧೆಡೆ ಧಾರ್ಮಿಕ ಭಾವೈಕ್ಯತೆ ಹಾಗೂ ಭಕ್ತಿಭಾವದೊಂದಿಗೆ ಪ್ರವಾದಿ ಹಜರತ್ ಮುಹಮ್ಮದ್ ಅವರ ಜನ್ಮದಿನವಾದ ಈದ್ ಮಿಲಾದ್-ಉನ್-ನಬಿ ಆಚರಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ಪ್ರವಾದಿ ಮುಹಮ್ಮದ್ ಅವರ ಜೀವನ, ಸಂದೇಶಗಳು ಹಾಗೂ ಬೋಧನೆಗಳನ್ನು ಸ್ಮರಿಸುವ ‘ಮೀಲಾದ್ ಮಹ್ಫಿಲ್’ ಮತ್ತು ‘ಸೀರತ್ ಸಮ್ಮೇಳನ’ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಹಲವು ಕಡೆಗಳಲ್ಲಿ ಮೆರವಣಿಗೆಗಳನ್ನೂ ಆಯೋಜಿಸಲಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ವಿವಿಧೆಡೆ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ.
ಈದ್ ಮಿಲಾದ್-ಉನ್-ನಬಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ. ಸಾಮಾಜಿಕ ಜಾಲತಾಣದ ಸಂದೇಶದಲ್ಲಿ ಅವರು, ಈ ಪವಿತ್ರ ಸಂದರ್ಭವು ದೇಶ ಹಾಗೂ ವಿಶ್ವದಾದ್ಯಂತ ಸೌಹಾರ್ದತೆ, ಒಗ್ಗಟ್ಟು ಮತ್ತು ಸಂತೋಷವನ್ನು ಮತ್ತಷ್ಟು ಹೆಚ್ಚಿಸಲಿ ಎಂದು ಆಶಿಸಿದ್ದಾರೆ.
ಅಲ್ಲದೆ, ಕರುಣೆ, ದಯೆ ಮತ್ತು ಸಮಾಜಕ್ಕೆ ಕೊಡುಗೆ ನೀಡುವ ಮನೋಭಾವ ಸದಾ ದೇಶವಾಸಿಗಳಿಗೆ ಮಾರ್ಗದರ್ಶನ ನೀಡಲಿ ಎಂದು ಪ್ರಧಾನಿ ಮೋದಿ ಹಾರೈಸಿದ್ದಾರೆ.


