ಜಾಗತಿಕ ನವೋದ್ಯಮದ ಕೇಂದ್ರವಾಗಿ ಭಾರತ ರೂಪುಗೊಳ್ಳಲಿ: ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಪ್ರಧಾನಿ ಮೋದಿ ಕರೆ

2 Min Read
2 Min Read

ನವದೆಹಲಿ: ಭಾರತವು ಜಾಗತಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ನವೋದ್ಯಮದ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಕರೆ ನೀಡಿದ್ದಾರೆ. ವಿಶ್ವದ ವಿವಿಧ ಭಾಗಗಳ ಪ್ರತಿಭಾವಂತರು ಬಾಹ್ಯಾಕಾಶ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಭಾರತವೇ ಮೊದಲ ಆಯ್ಕೆಯಾಗುವಂತಹ ವಾತಾವರಣ ನಿರ್ಮಿಸಬೇಕು ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ ಬಾಹ್ಯಾಕಾಶ ಕ್ಷೇತ್ರದ 20 ಸ್ಟಾರ್ಟ್‌ಅಪ್‌ಗಳ ಸಿಇಒಗಳು ಮತ್ತು ಸಂಸ್ಥಾಪಕರೊಂದಿಗೆ ನಡೆದ ಸಂವಾದದಲ್ಲಿ ಪ್ರಧಾನಿ ಮೋದಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಬಾಹ್ಯಾಕಾಶ ದಿನದ ಅಂಗವಾಗಿ ಇಂದು ಬಿಡುಗಡೆ ಮಾಡಲಾದ ಸಂವಾದದ ವಿವರಗಳಲ್ಲಿ, ಭಾರತದಲ್ಲಿ ಬಾಹ್ಯಾಕಾಶ ಯೋಜನೆಗಳನ್ನು ಕಡಿಮೆ ವೆಚ್ಚದಲ್ಲಿ ಕೈಗೊಳ್ಳುವ ಸಾಮರ್ಥ್ಯವಿರುವುದನ್ನೂ ಪ್ರಧಾನಿ ಪ್ರಮುಖವಾಗಿ ಉಲ್ಲೇಖಿಸಿದ್ದಾರೆ.

ಜಾಗತಿಕ ಪ್ರತಿಭೆಯನ್ನು ಆಕರ್ಷಿಸುವ ಪರಿಸರ ನಿರ್ಮಿಸಿ

ಬಾಹ್ಯಾಕಾಶ ಕ್ಷೇತ್ರದ ಸ್ಟಾರ್ಟ್‌ಅಪ್‌ಗಳು ತಮ್ಮ ಪ್ರಯತ್ನಗಳಲ್ಲಿ ನಿರಂತರತೆಯನ್ನು ಕಾಯ್ದುಕೊಂಡು, ವಿಶ್ವದ ವಿವಿಧ ಭಾಗಗಳ ಪ್ರತಿಭೆಗಳನ್ನು ಆಕರ್ಷಿಸುವ ಬಲಿಷ್ಠ ಬಾಹ್ಯಾಕಾಶ ಪರಿಸರ ವ್ಯವಸ್ಥೆ ನಿರ್ಮಿಸಬೇಕು ಎಂದು ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ.

ಭಾರತದ ವೆಚ್ಚದ ಸ್ಪರ್ಧಾತ್ಮಕತೆ, ಗುಣಮಟ್ಟದ ಮಾನವ ಸಂಪನ್ಮೂಲ ಹಾಗೂ ನವೀನ ಚಿಂತನೆಗಳು ದೇಶವನ್ನು ಜಾಗತಿಕ ಬಾಹ್ಯಾಕಾಶ ಉದ್ಯಮದಲ್ಲಿ ಮತ್ತಷ್ಟು ಬಲಿಷ್ಠ ಸ್ಥಾನಕ್ಕೇರಿಸುವ ಸಾಮರ್ಥ್ಯ ಹೊಂದಿವೆ ಎಂದು ಅವರು ಹೇಳಿದ್ದಾರೆ.

ಭಾರತದ ಮೊದಲ ಬಾಹ್ಯಾಕಾಶ ತಂತ್ರಜ್ಞಾನ ಯುನಿಕಾರ್ನ್ ಸಂಸ್ಥೆ ಸ್ಕೈರೂಟ್ ಏರೋಸ್ಪೇಸ್ನ ಸಿಇಒ ಪವನ್ ಕುಮಾರ್ ಚಂದನ ಅವರು ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿ ವಲಯಕ್ಕೆ ಮುಕ್ತಗೊಳಿಸಿದಕ್ಕಾಗಿ ಪ್ರಧಾನಿಗೆ ಧನ್ಯವಾದ ಸಲ್ಲಿಸಿದರು. ಜುಲೈ 18ರಂದು ಭಾರತದಲ್ಲಿ ಖಾಸಗಿಯಾಗಿ ಅಭಿವೃದ್ಧಿಪಡಿಸಲಾದ ಮೊದಲ ರಾಕೆಟ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿರುವುದಾಗಿ ಅವರು ತಿಳಿಸಿದರು.

ಚಂದ್ರಯಾನ–3 ಯಶಸ್ಸಿನ ಸ್ಮರಣೆಯಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನ

ದೇಶವು ಪ್ರತಿವರ್ಷ ಆಗಸ್ಟ್ 23ರಂದು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಚರಿಸುತ್ತದೆ. 2023ರ ಇದೇ ದಿನ ಚಂದ್ರಯಾನ–3 ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಸಮೀಪ ಐತಿಹಾಸಿಕ ಸಾಫ್ಟ್ ಲ್ಯಾಂಡಿಂಗ್ ಸಾಧಿಸಿತ್ತು. ಇದರೊಂದಿಗೆ ಚಂದ್ರನ ದಕ್ಷಿಣ ಧ್ರುವ ಪ್ರದೇಶ ತಲುಪಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿತ್ತು.

ರಾಷ್ಟ್ರೀಯ ಬಾಹ್ಯಾಕಾಶ ದಿನದ ಅಂಗವಾಗಿ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಶುಭಾಶಯ ಕೋರಿದರು.

ಸಾಮಾಜಿಕ ಜಾಲತಾಣದ ಸಂದೇಶದಲ್ಲಿ ಉಪರಾಷ್ಟ್ರಪತಿ ರಾಧಾಕೃಷ್ಣನ್, ಬಾಹ್ಯಾಕಾಶ ಅನ್ವೇಷಣೆಯಲ್ಲಿ ಭಾರತದ ಗಮನಾರ್ಹ ಸಾಧನೆಗಳು ದೇಶದ ವೈಜ್ಞಾನಿಕ ಶ್ರೇಷ್ಠತೆ, ನವೀನತೆಯ ಮನೋಭಾವ ಹಾಗೂ ಜ್ಞಾನದ ಗಡಿಗಳನ್ನು ವಿಸ್ತರಿಸುವ ದೃಢಸಂಕಲ್ಪಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಕೂಡ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡು, ಬದಲಾಗುತ್ತಿರುವ ಜಾಗತಿಕ ವ್ಯವಸ್ಥೆಯಲ್ಲಿ ಭಾರತ ತನ್ನ ಬಾಹ್ಯಾಕಾಶ ಕ್ಷೇತ್ರವನ್ನು ನಿರಂತರವಾಗಿ ವಿಸ್ತರಿಸುತ್ತಿದೆ ಎಂದು ಹೇಳಿದ್ದಾರೆ.

‘ಚಂದ್ರಯಾನ–3 ಭಾರತವನ್ನು ಮುಂಚೂಣಿ ಬಾಹ್ಯಾಕಾಶ ರಾಷ್ಟ್ರವನ್ನಾಗಿಸಿದೆ’

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ರಾಷ್ಟ್ರೀಯ ಬಾಹ್ಯಾಕಾಶ ದಿನದಂದು ಚಂದ್ರಯಾನ–3ರ ಐತಿಹಾಸಿಕ ಸಾಫ್ಟ್ ಲ್ಯಾಂಡಿಂಗ್ ಅನ್ನು ಸ್ಮರಿಸಿದರು. ಈ ಸಾಧನೆಯು ಭಾರತವನ್ನು ವಿಶ್ವದ ಪ್ರಮುಖ ಬಾಹ್ಯಾಕಾಶ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸಿದೆ ಎಂದು ಅವರು ಹೇಳಿದರು.

ಚಂದ್ರಯಾನ–3ರ ಯಶಸ್ಸಿನಲ್ಲಿ ಭಾರತೀಯ ವಿಜ್ಞಾನಿಗಳು ನೀಡಿದ ಅದ್ಭುತ ಕೊಡುಗೆಯನ್ನು ಅವರು ಶ್ಲಾಘಿಸಿದರು.

Share This Article