ಪಾಕಿಸ್ತಾನದ ಐಎಸ್‌ಐ ಸಂಪರ್ಕದ ಆರೋಪ: ಮಲೇಷ್ಯಾದಿಂದ ಗಡಿಪಾರುಗೊಂಡ ಮೂವರು ಗ್ಯಾಂಗ್‌ ಸದಸ್ಯರ ಬಂಧನ

1 Min Read
1 Min Read

ಮಲೇಷ್ಯಾದಿಂದ ಗಡಿಪಾರು ಮಾಡಿಸಿ ಭಾರತಕ್ಕೆ ಕರೆತರಲಾದ ಕುಖ್ಯಾತ ಗ್ಯಾಂಗ್‌ಗೆ ಸೇರಿದ ಮೂವರು ವಾಂಟೆಡ್‌ ಆರೋಪಿಗಳನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ಕೇಂದ್ರ ತನಿಖಾ ಸಂಸ್ಥೆಗಳ ಸಹಕಾರದೊಂದಿಗೆ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಂಜಾಬ್‌ ಪೊಲೀಸ್‌ ಮಹಾನಿರ್ದೇಶಕ (DGP) ಗೌರವ್‌ ಯಾದವ್‌ ಅವರ ಪ್ರಕಾರ, ಬಂಧಿತ ಮೂವರು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಜತೆ ಸಂಪರ್ಕ ಹೊಂದಿದ್ದರು ಎನ್ನಲಾಗಿದ್ದು, ಕೊಲೆ, ಸುಲಿಗೆ, ಸ್ಫೋಟಕ ಪ್ರಕರಣಗಳು ಸೇರಿದಂತೆ ಹಲವು ಗಂಭೀರ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದರು.

ಲೂಧಿಯಾನದಲ್ಲಿ ಕೈಗ್ರನೇಡ್‌ ಸ್ಫೋಟ ನಡೆಸಲು ಸಂಚು ರೂಪಿಸಿದ ಆರೋಪಕ್ಕೂ ಈ ಮೂವರ ವಿರುದ್ಧ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರನ್ನು ಜಸ್‌ಪ್ರೀತ್‌ ಸಿಂಗ್‌, ಅಜಯ್‌ ಸಿಂಗ್‌ ಮತ್ತು ಪವನ್‌ದೀಪ್‌ ಸಿಂಗ್‌ ಎಂದು ಗುರುತಿಸಲಾಗಿದೆ. ಮಲೇಷ್ಯಾದಿಂದ ಭಾರತಕ್ಕೆ ಕರೆತರಲಾದ ಅವರು ಇಂದು ನವದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (IGI) ಆಗಮಿಸಿದ ತಕ್ಷಣ ಪಂಜಾಬ್ ಪೊಲೀಸರು ಅವರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಹೆಚ್ಚಿನ ವಿಚಾರಣೆ ಮತ್ತು ತನಿಖೆಗಾಗಿ ಪಂಜಾಬ್‌ಗೆ ಕರೆದೊಯ್ಯಲಾಗುತ್ತಿದೆ. ಅವರ ಅಪರಾಧ ಚಟುವಟಿಕೆಗಳು, ವಿದೇಶಿ ಸಂಪರ್ಕಗಳು ಹಾಗೂ ಪ್ರಕರಣಗಳಿಗೆ ಸಂಬಂಧಿಸಿದ ಇತರ ಅಂಶಗಳ ಕುರಿತು ತನಿಖೆ ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article