ಬೀರ್ಭೂಮ್: ಪಶ್ಚಿಮ ಬಂಗಾಳದ ಬೀರ್ಭೂಮ್ ಜಿಲ್ಲೆಯಲ್ಲಿ ತಾರಾಪೀಠ ಪೊಲೀಸ್ ಠಾಣೆಯ ಸಮೀಪದ ನಾಲ್ಕು ಅಂತಸ್ತಿನ ಹೋಟೆಲ್‌ನಲ್ಲಿ ಇಂದು ಮುಂಜಾನೆ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಕನಿಷ್ಠ ಐವರು ಮೃತಪಟ್ಟಿದ್ದು, ಹಲವರು ಅಸ್ವಸ್ಥರಾಗಿದ್ದಾರೆ.
ವರದಿಗಳ ಪ್ರಕಾರ, ಹೋಟೆಲ್‌ನ ಸ್ವಾಗತ ಕೌಂಟರ್‌ನಲ್ಲಿ (ರಿಸೆಪ್ಷನ್) ಮೊದಲು ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಸಮಯದಲ್ಲಿ ಕಟ್ಟಡದ ಇತರ ಭಾಗಗಳಿಗೂ ವ್ಯಾಪಿಸಿದೆ. ಬೆಂಕಿ ಕಾಣಿಸಿಕೊಂಡ ಸಂದರ್ಭದಲ್ಲಿ ಹೋಟೆಲ್‌ನಲ್ಲಿದ್ದ ಬಹುತೇಕ ಅತಿಥಿಗಳು ಗಾಢ ನಿದ್ರೆಯಲ್ಲಿದ್ದರು ಎನ್ನಲಾಗಿದೆ.
ಶ್ರಾವಣದ ಕೊನೆಯ ಸೋಮವಾರ ಭಕ್ತರ ದಟ್ಟಣೆ
ಶ್ರಾವಣ ಮಾಸದ ಕೊನೆಯ ಸೋಮವಾರದ ಅಂಗವಾಗಿ ತಾರಾಪೀಠಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ರಾಜ್ಯದ ಪ್ರಮುಖ ಹಾಗೂ ಐತಿಹಾಸಿಕ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿರುವ ತಾರಾಪೀಠಕ್ಕೆ ಬಂದಿದ್ದ ಹಲವು ಯಾತ್ರಿಕರು ಈ ಹೋಟೆಲ್‌ನಲ್ಲಿ ತಂಗಿದ್ದರು ಎಂದು ತಿಳಿದುಬಂದಿದೆ.
ಬೆಂಕಿ ಕಾಣಿಸಿಕೊಂಡ ಬಳಿಕ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.
ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ?
ಹೋಟೆಲ್ ಮಾಲೀಕರ ಪ್ರಾಥಮಿಕ ಹೇಳಿಕೆಯ ಪ್ರಕಾರ, ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಅಗ್ನಿ ಅವಘಡದ ನಿಖರ ಕಾರಣ ಹಾಗೂ ಹಾನಿಯ ಪ್ರಮಾಣದ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಕಟ್ಟಡದಲ್ಲಿದ್ದ ಇತರ ಅತಿಥಿಗಳ ಸುರಕ್ಷತೆ ಖಚಿತಪಡಿಸಲು ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.


