ಭಾರತ–ಲೈಬೀರಿಯಾ ಬಾಂಧವ್ಯಕ್ಕೆ ಮತ್ತಷ್ಟು ಬಲ: ವಿದೇಶಾಂಗ ಸಚಿವೆ ಸಾರಾ ನ್ಯಾಂತಿ ಭಾರತಕ್ಕೆ

1 Min Read
1 Min Read

ನವದೆಹಲಿ: ಲೈಬೀರಿಯಾದ ವಿದೇಶಾಂಗ ಸಚಿವೆ ಸಾರಾ ಬೆೈಸೊಲೋ ನ್ಯಾಂತಿ ಅವರು ಎರಡು ದಿನಗಳ ಭಾರತ ಪ್ರವಾಸಕ್ಕಾಗಿ ಇಂದು ಬೆಳಗ್ಗೆ ನವದೆಹಲಿಗೆ ಆಗಮಿಸಿದ್ದಾರೆ.

ಭಾರತ ಪ್ರವಾಸದ ವೇಳೆ ಅವರು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರನ್ನು ಭೇಟಿಯಾಗಲಿದ್ದು, ನವದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ಇಂದು ಮಾತುಕತೆ ನಡೆಸಲಿದ್ದಾರೆ. ಭಾರತ ಮತ್ತು ಲೈಬೀರಿಯಾ ನಡುವಿನ ಆತ್ಮೀಯ ಹಾಗೂ ಸ್ನೇಹಪೂರ್ಣ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಈ ಭೇಟಿ ಮಹತ್ವದ ಅವಕಾಶ ಒದಗಿಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ತಿಳಿಸಿದೆ.

ಭಾರತವು ಲೈಬೀರಿಯಾಕ್ಕೆ ನೀಡುತ್ತಿರುವ ಸುಂಕಮುಕ್ತ ಆದ್ಯತಾ ಯೋಜನೆಯಿಂದ ಆ ದೇಶದ ರಫ್ತಿಗೆ ಉತ್ತೇಜನ ದೊರೆಯುತ್ತಿದೆ. ಇದರ ಮೂಲಕ ಮರ, ಸಸ್ಯಜನ್ಯ ಎಣ್ಣೆ, ರಬ್ಬರ್ ಸೇರಿದಂತೆ ವಿವಿಧ ಸರಕುಗಳನ್ನು ಲೈಬೀರಿಯಾ ಭಾರತಕ್ಕೆ ಸುಲಭವಾಗಿ ರಫ್ತು ಮಾಡಲು ಅವಕಾಶವಿದೆ ಎಂದು ಸಚಿವಾಲಯ ತಿಳಿಸಿದೆ.

ಪ್ರಸ್ತುತ ಲೈಬೀರಿಯಾದಲ್ಲಿ ವಿವಿಧ ಕ್ಷೇತ್ರಗಳಲ್ಲಿ 200ಕ್ಕೂ ಹೆಚ್ಚು ಭಾರತೀಯ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ವಾಹನೋದ್ಯಮ, ಗಣಿಗಾರಿಕೆ, ಆರೋಗ್ಯ ಸೇವೆ, ಎಲೆಕ್ಟ್ರಾನಿಕ್ಸ್ ಹಾಗೂ ಔಷಧೀಯ ಕ್ಷೇತ್ರಗಳಲ್ಲಿ ಭಾರತೀಯ ಕಂಪನಿಗಳ ಉಪಸ್ಥಿತಿ ಇದೆ.

ಇದಲ್ಲದೆ, ಲೈಬೀರಿಯಾ ಅಂತಾರಾಷ್ಟ್ರೀಯ ಸೌರ ಒಕ್ಕೂಟದ (ISA) ಸದಸ್ಯ ರಾಷ್ಟ್ರವಾಗಿದ್ದು, ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿಯೂ ಭಾರತ ಮತ್ತು ಲೈಬೀರಿಯಾ ನಡುವೆ ಸಹಕಾರಕ್ಕೆ ಅವಕಾಶವಿದೆ.

Share This Article