ಲಡಾಖ್: ಅಳಿವಿನಂಚಿನಲ್ಲಿರುವ ಅಪರೂಪದ ಬ್ಲ್ಯಾಕ್-ನೆಕ್ಡ್ ಕ್ರೇನ್ (ಕಪ್ಪು ಕುತ್ತಿಗೆಯ ಕೊಕ್ಕರೆ) ಸಂರಕ್ಷಣೆಯ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ಲಡಾಖ್ನಲ್ಲಿ ಇದೇ ಮೊದಲ ಬಾರಿಗೆ ವಿಶೇಷ ಬ್ಲ್ಯಾಕ್-ನೆಕ್ಡ್ ಕ್ರೇನ್ ಉತ್ಸವ ಆಯೋಜಿಸಲಾಗಿದೆ.
ಲಡಾಖ್ನ ಚಾಂಗ್ಥಾಂಗ್ ಶೀತ ವಲಯ ವನ್ಯಜೀವಿ ಅಭಯಾರಣ್ಯ ದೇಶದಲ್ಲಿ ಈ ಅಪರೂಪದ ಪಕ್ಷಿಯ ಸಂತಾನೋತ್ಪತ್ತಿಗೆ ಇರುವ ಏಕೈಕ ತಾಣವಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷಿಯ ಆವಾಸಸ್ಥಾನ ಸಂರಕ್ಷಣೆಯಲ್ಲಿ ಲಡಾಖ್ನ ಪಾತ್ರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಉತ್ಸವ ಆಯೋಜಿಸಲಾಗಿದೆ.
ಲಡಾಖ್ನ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ಮೂರು ದಿನಗಳ ಉತ್ಸವಕ್ಕೆ ನಿನ್ನೆ ಚಾಲನೆ ನೀಡಿದರು. ಉತ್ಸವ ನಾಳೆ ಮುಕ್ತಾಯಗೊಳ್ಳಲಿದೆ. ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಈ ವಿಶೇಷ ಕಾರ್ಯಕ್ರಮವು ದೇಶ-ವಿದೇಶಗಳ ಸಂರಕ್ಷಣಾವಾದಿಗಳು, ಸಂಶೋಧಕರು ಹಾಗೂ ತಜ್ಞರನ್ನು ಒಂದೇ ವೇದಿಕೆಗೆ ತಂದು ಪಕ್ಷಿ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಲು ಸಹಕಾರಿಯಾಗಲಿದೆ.
ಎತ್ತರದ ಪ್ರದೇಶಗಳಲ್ಲಿ ಸಂತಾನೋತ್ಪತ್ತಿ
ವಿಶ್ವದಲ್ಲಿರುವ 15 ಕ್ರೇನ್ ಪ್ರಭೇದಗಳ ಪೈಕಿ ಬ್ಲ್ಯಾಕ್-ನೆಕ್ಡ್ ಕ್ರೇನ್ ಮಾತ್ರ ಆಲ್ಪೈನ್ ಕ್ರೇನ್ ಆಗಿದೆ. ಲಡಾಖ್ನ ಚಾಂಗ್ಥಾಂಗ್ ಶೀತ ವಲಯ ವನ್ಯಜೀವಿ ಅಭಯಾರಣ್ಯದಲ್ಲಿರುವ ತ್ಸೋಕಾರ್, ಹಾನ್ಲೆ ಸೇರಿದಂತೆ ಸಮುದ್ರ ಮಟ್ಟದಿಂದ 2,500ರಿಂದ 5,000 ಮೀಟರ್ ಎತ್ತರದಲ್ಲಿರುವ ಜಲಭೂಮಿಗಳು ಈ ಪಕ್ಷಿಯ ಪ್ರಮುಖ ಸಂತಾನೋತ್ಪತ್ತಿ ತಾಣಗಳಾಗಿವೆ.
ಭಾರತ ಸೇರಿದಂತೆ ಭೂತಾನ್, ನೇಪಾಳ ಮತ್ತು ಚೀನಾದಲ್ಲಿ ಒಟ್ಟು ಸುಮಾರು 16,000 ಬ್ಲ್ಯಾಕ್-ನೆಕ್ಡ್ ಕ್ರೇನ್ಗಳು ಕಂಡುಬರುತ್ತವೆ ಎಂದು ಮಾಹಿತಿ ನೀಡಲಾಗಿದೆ.
ಲಡಾಖ್ನ ಪವಿತ್ರ ಪಕ್ಷಿ
ಬ್ಲ್ಯಾಕ್-ನೆಕ್ಡ್ ಕ್ರೇನ್ಗೆ ಪರಿಸರದ ಜೊತೆಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವವೂ ಇದೆ. ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಿ ರೂಪುಗೊಂಡ ಬಳಿಕ ಈ ಪಕ್ಷಿಯನ್ನು ಲಡಾಖ್ನ ರಾಜ್ಯ ಪಕ್ಷಿ ಎಂದು ಘೋಷಿಸಲಾಗಿದೆ. ಇದಕ್ಕೂ ಮೊದಲು ಇದು ಜಮ್ಮು ಮತ್ತು ಕಾಶ್ಮೀರದ ಹಿಂದಿನ ರಾಜ್ಯದ ರಾಜ್ಯ ಪಕ್ಷಿಯಾಗಿತ್ತು.
ಲಡಾಖ್ನಲ್ಲಿ ಬ್ಲ್ಯಾಕ್-ನೆಕ್ಡ್ ಕ್ರೇನ್ ಅನ್ನು ಪವಿತ್ರ ಪಕ್ಷಿಯೆಂದು ಪರಿಗಣಿಸಲಾಗುತ್ತದೆ. ಬೇಸಿಗೆಯಲ್ಲಿ ಸಂತಾನೋತ್ಪತ್ತಿಗಾಗಿ ಈ ಪಕ್ಷಿಗಳು ಆಗಮಿಸುವುದನ್ನು ಶುಭ ಸಂಕೇತ ಹಾಗೂ ಶಾಂತಿಯ ಪ್ರತೀಕ ಎಂದು ಸ್ಥಳೀಯರು ನಂಬುತ್ತಾರೆ.


