ನವದೆಹಲಿ: ಕಾಮನ್ವೆಲ್ತ್ ಗೇಮ್ಸ್ 2026ರಲ್ಲಿ ಪದಕ ಗೆದ್ದ ಭಾರತೀಯ ಕ್ರೀಡಾಪಟುಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನವದೆಹಲಿಯ ತಮ್ಮ ನಿವಾಸದಲ್ಲಿ ಭೇಟಿಯಾಗಿ ಅಭಿನಂದಿಸಿದರು. ಕ್ರೀಡಾಕೂಟದ ಅನುಭವಗಳನ್ನು ಕ್ರೀಡಾಪಟುಗಳು ಪ್ರಧಾನಿಯೊಂದಿಗೆ ಹಂಚಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕೇವಲ ಔಪಚಾರಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಪ್ರತಿಷ್ಠೆ ದೊರೆಯುವುದಿಲ್ಲ. ಯುವ ವಿದ್ಯಾರ್ಥಿ ಅಥವಾ ಭವಿಷ್ಯದ ಕ್ರೀಡಾಪಟುವಿನ ಉತ್ಸಾಹ ಮತ್ತು ಮನೋಭಾವದೊಂದಿಗೆ ಕಣಕ್ಕಿಳಿದು ಸಾಧನೆ ಮಾಡುವುದೇ ದೇಶದ ಗೌರವವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ಕ್ರೀಡಾಪಟುಗಳು ‘ಖೇಲೋ ಇಂಡಿಯಾ’ ಕಾರ್ಯಕ್ರಮದ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಶ್ರಮಿಸುವಂತೆ ಪ್ರಧಾನಿ ಮೋದಿ ಪ್ರೋತ್ಸಾಹಿಸಿದರು.
ಮೀರಾಬಾಯಿ ಚಾನುಗೆ ಮೋದಿ ಮೆಚ್ಚುಗೆ
ಭಾರತದ ಖ್ಯಾತ ವೇಟ್ಲಿಫ್ಟರ್ ಸೈಖೋಮ್ ಮೀರಾಬಾಯಿ ಚಾನು ಅವರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, ಅವರ ಗೆಲುವು ಮುಂದಿನ ಪೀಳಿಗೆಯ ಕ್ರೀಡಾಪಟುಗಳಿಗೆ ಅಪಾರ ಸ್ಫೂರ್ತಿಯಾಗಿದೆ ಎಂದು ಹೇಳಿದರು.
ಕ್ರೀಡಾಪಟುಗಳ ಪರಿಶ್ರಮ, ಸಮರ್ಪಣೆ ಹಾಗೂ ಸಾಧನೆ ದೇಶದ ಯುವಜನತೆಗೆ ಕ್ರೀಡೆಯತ್ತ ಹೆಜ್ಜೆ ಇಡಲು ಪ್ರೇರಣೆ ನೀಡುತ್ತಿದೆ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಹಾಗೂ ರಾಜ್ಯ ಸಚಿವ ರಕ್ಷಾ ನಿಖಿಲ್ ಖಡ್ಸೆ ಅವರು ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪದಕ ಪಟ್ಟಿಯಲ್ಲಿ ಭಾರತಕ್ಕೆ ನಾಲ್ಕನೇ ಸ್ಥಾನ
ಸ್ಕಾಟ್ಲೆಂಡ್ನ ಗ್ಲಾಸ್ಗೋದಲ್ಲಿ ಜುಲೈ 23ರಿಂದ ಆಗಸ್ಟ್ 2ರವರೆಗೆ ನಡೆದ ಕಾಮನ್ವೆಲ್ತ್ ಗೇಮ್ಸ್ 2026ರಲ್ಲಿ ಭಾರತ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿತು.
ಭಾರತೀಯ ಕ್ರೀಡಾಪಟುಗಳು ವಿವಿಧ ಕ್ರೀಡಾ ವಿಭಾಗಗಳಲ್ಲಿ ಒಟ್ಟು 39 ಪದಕಗಳನ್ನು ಗೆದ್ದಿದ್ದಾರೆ. ಇದರಲ್ಲಿ 13 ಚಿನ್ನ, 17 ಬೆಳ್ಳಿ ಮತ್ತು 9 ಕಂಚಿನ ಪದಕಗಳು ಸೇರಿವೆ.
ಈ ಸಾಧನೆಗಾಗಿ ಪದಕ ವಿಜೇತ ಕ್ರೀಡಾಪಟುಗಳನ್ನು ಪ್ರಧಾನಿ ಮೋದಿ ಅಭಿನಂದಿಸಿದ್ದು, ಮುಂದಿನ ದಿನಗಳಲ್ಲೂ ದೇಶದ ಕ್ರೀಡಾ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವಂತೆ ಶುಭ ಹಾರೈಸಿದರು.


