ಜೆರುಸಲೇಂ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಸ್ತಾಪಿಸಿರುವ ಗಾಜಾ ಕುರಿತ 15 ಅಂಶಗಳ ಯೋಜನೆಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿರಸ್ಕರಿಸಿದ್ದಾರೆ. ಹಮಾಸ್ ಸಂಪೂರ್ಣವಾಗಿ ನಿಶ್ಶಸ್ತ್ರೀಕರಣಗೊಂಡಿದೆ ಎಂಬ ಖಚಿತತೆ ಸಿಗುವವರೆಗೆ ಗಾಜಾದಿಂದ ಇಸ್ರೇಲಿ ಪಡೆಗಳನ್ನು ಹಿಂಪಡೆಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮಾತನಾಡಿದ ನೆತನ್ಯಾಹು, ಇಸ್ರೇಲಿ ಪಡೆಗಳು ಹಾಗೂ ನಾಗರಿಕರಿಗೆ ಎದುರಾಗುವ ಯಾವುದೇ ಬೆದರಿಕೆಯನ್ನು ತಡೆಯಲು ಇಸ್ರೇಲ್ ತನ್ನ ಕಾರ್ಯಾಚರಣೆಗಳನ್ನು ಮುಂದುವರಿಸಲಿದೆ ಎಂದು ಹೇಳಿದರು.
ಗಾಜಾ ವಿಚಾರದಲ್ಲಿ ಮುಂದಿನ ಕ್ರಮಗಳ ಕುರಿತು ಇಸ್ರೇಲಿ ಅಧಿಕಾರಿಗಳು ಅಮೆರಿಕದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದರು.
ಇದಕ್ಕೂ ಮುನ್ನ, ಟ್ರಂಪ್ ಅವರ ‘ಬೋರ್ಡ್ ಆಫ್ ಪೀಸ್’ ಕಳೆದ ತಿಂಗಳು ಗಾಜಾದಲ್ಲಿ ಹಮಾಸ್‌ನ ಸಂಪೂರ್ಣ ನಿಶ್ಶಸ್ತ್ರೀಕರಣಕ್ಕೆ ಸಂಬಂಧಿಸಿದ ಒಪ್ಪಂದವನ್ನು ತಲುಪಿರುವುದಾಗಿ ಹೇಳಿತ್ತು. ಆದರೆ ಹಮಾಸ್ ತನ್ನ ಭಾರೀ ಶಸ್ತ್ರಾಸ್ತ್ರಗಳನ್ನು ಒಪ್ಪಿಸುವ ವಿಚಾರವು ಇಸ್ರೇಲ್ ಗಾಜಾದಲ್ಲಿನ ತನ್ನ ಎಲ್ಲ ರೀತಿಯ ದಾಳಿಗಳನ್ನು ನಿಲ್ಲಿಸಿ, ಅಲ್ಲಿಂದ ತನ್ನ ಪಡೆಗಳನ್ನು ಹಿಂಪಡೆಯುವುದರ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದೆ.
ಕಳೆದ ಅಕ್ಟೋಬರ್‌ನಲ್ಲಿ ಆರಂಭಿಕ ಕದನ ವಿರಾಮ ಒಪ್ಪಂದ ಜಾರಿಯಾಗಿದ್ದರೂ, ಗಾಜಾ ಪ್ರದೇಶದಲ್ಲಿ ಇಸ್ರೇಲ್ ದಾಳಿಗಳು ಮುಂದುವರಿದಿವೆ ಎಂದು ವರದಿಯಾಗಿದೆ.
ಹಮಾಸ್‌ನ ನಿಶ್ಶಸ್ತ್ರೀಕರಣ, ಇಸ್ರೇಲಿ ಪಡೆಗಳ ಹಿಂಪಡೆತ ಹಾಗೂ ಗಾಜಾದ ಭದ್ರತೆ ಕುರಿತ ಭಿನ್ನಾಭಿಪ್ರಾಯಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ, ಟ್ರಂಪ್ ಅವರ ಪ್ರಸ್ತಾವಿತ ಯೋಜನೆಯ ಅನುಷ್ಠಾನಕ್ಕೆ ಹೊಸ ಸವಾಲು ಎದುರಾಗಿದೆ.


