ನವದೆಹಲಿ: ರಾಷ್ಟ್ರೀಯ ಕೈಮಗ್ಗ ದಿನಾಚರಣೆಯನ್ನು ಉತ್ಸಾಹ ಮತ್ತು ಸಂಭ್ರಮದಿಂದ ಆಚರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಕರೆ ನೀಡಿದ್ದಾರೆ.
ರಾಷ್ಟ್ರೀಯ ಕೈಮಗ್ಗ ದಿನದ ಹಿನ್ನೆಲೆಯಲ್ಲಿ ವಿಡಿಯೋ ಸಂದೇಶ ಹಂಚಿಕೊಂಡಿರುವ ಪ್ರಧಾನಿ ಮೋದಿ, 1905ರ ಆಗಸ್ಟ್ 7ರಂದು ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸ್ವದೇಶಿ ಚಳವಳಿ ಆರಂಭವಾಗಿತ್ತು ಎಂದು ಸ್ಮರಿಸಿದ್ದಾರೆ. ಬ್ರಿಟಿಷರ ಆಡಳಿತದ ವಿರುದ್ಧ ನಡೆದ ಈ ಐತಿಹಾಸಿಕ ಹೋರಾಟದಲ್ಲಿ ಸಮಾಜದ ವಿವಿಧ ವರ್ಗಗಳ ಜನರು ಒಗ್ಗೂಡಿ ಭಾಗವಹಿಸಿದ್ದರು ಎಂದು ಅವರು ಹೇಳಿದ್ದಾರೆ.
ತಮ್ಮ ಕೈಗಳಿಂದ ಬಟ್ಟೆಗಳನ್ನು ತಯಾರಿಸುವ ಬಡ ನೇಕಾರ ಕುಟುಂಬಗಳು ಹಾಗೂ ಕುಶಲಕರ್ಮಿಗಳನ್ನು ಬೆಂಬಲಿಸುವಂತೆ ಪ್ರಧಾನಿ ಮೋದಿ ಜನರನ್ನು ಪ್ರೋತ್ಸಾಹಿಸಿದ್ದಾರೆ. ದೇಶವನ್ನು ಸ್ವಾವಲಂಬಿ ರಾಷ್ಟ್ರವನ್ನಾಗಿ ನಿರ್ಮಿಸುವ ನಿಟ್ಟಿನಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಸಣ್ಣ ನೇಕಾರ ಕುಟುಂಬಗಳನ್ನು ಬಲಪಡಿಸುವುದು ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರತಿ ನಾಗರಿಕರೂ ಕನಿಷ್ಠ ಒಂದು ಕೈಮಗ್ಗ ಉತ್ಪನ್ನವನ್ನು ಖರೀದಿಸಿ, ಅದರ ಕುರಿತು ವಿಡಿಯೋವೊಂದನ್ನು ತಯಾರಿಸಿ ದೇಶದಾದ್ಯಂತ ಹಾಗೂ ಜಾಗತಿಕವಾಗಿ ಹಂಚಿಕೊಳ್ಳುವಂತೆ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ. ಇದರಿಂದ ಭಾರತೀಯ ನೇಕಾರರು ಮತ್ತು ಕುಶಲಕರ್ಮಿಗಳ ಕೌಶಲ್ಯ ಹಾಗೂ ಕರಕುಶಲತೆಗೆ ವಿಶ್ವಮಟ್ಟದಲ್ಲಿ ಹೆಚ್ಚಿನ ಮನ್ನಣೆ ದೊರೆಯಲಿದೆ ಎಂದು ಅವರು ಹೇಳಿದ್ದಾರೆ.
ಪ್ರತಿ ವರ್ಷ ಆಗಸ್ಟ್ 7ರಂದು ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲಾಗುತ್ತದೆ. 1905ರ ಇದೇ ದಿನ ಆರಂಭವಾದ ಸ್ವದೇಶಿ ಚಳವಳಿಯ ಸ್ಮರಣಾರ್ಥವಾಗಿ ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲಾಗುತ್ತಿದೆ.


