ಚೆನ್ನೈ: ವಿದ್ಯಾರ್ಥಿಗಳು ಇಂಗ್ಲಿಷ್ ಕಲಿಯುವುದಕ್ಕೂ ಮುನ್ನ ತಮ್ಮ ಮಾತೃಭಾಷೆಯಲ್ಲಿ ಉತ್ತಮ ಹಿಡಿತ ಬೆಳೆಸಿಕೊಳ್ಳಬೇಕು ಎಂದು ತಮಿಳು ನಟ ಹಾಗೂ ನಿರ್ದೇಶಕ ಧನುಷ್ ಸಲಹೆ ನೀಡಿದ್ದಾರೆ.
ಚೆನ್ನೈನ ಸಾಲಿಗ್ರಾಮಂನಲ್ಲಿರುವ ತಾವು ಓದಿದ್ದ ಥಾಯ್ ಸತ್ಯ ಮೆಟ್ರಿಕ್ಯುಲೇಷನ್ ಶಾಲೆಗೆ ಇತ್ತೀಚೆಗೆ ಭೇಟಿ ನೀಡಿದ ಧನುಷ್, ತಾವು ಆರ್ಥಿಕ ನೆರವು ನೀಡಿರುವ ಮೂರು ಅಂತಸ್ತಿನ ನೂತನ ಶೈಕ್ಷಣಿಕ ಕಟ್ಟಡವನ್ನು ಉದ್ಘಾಟಿಸಿದರು.
ಧನುಷ್ ಅವರು ಎಲ್ಕೆಜಿಯಿಂದ 10ನೇ ತರಗತಿವರೆಗೆ ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದರು. ನಂತರ ಬೇರೆ ಸಂಸ್ಥೆಯಲ್ಲಿ ಹೈಯರ್ ಸೆಕೆಂಡರಿ ಶಿಕ್ಷಣ ಪೂರ್ಣಗೊಳಿಸಿದ್ದರು. ಹಳೆಯ ಶಾಲೆಗೆ ಮರಳಿದ ಸಂದರ್ಭ ಅವರಿಗೆ ನಾಸ್ಟಾಲ್ಜಿಕ್ ಅನುಭವ ನೀಡಿತು.
ಕಟ್ಟಡ ಉದ್ಘಾಟನೆಯ ಬಳಿಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಧನುಷ್, ಯುವಕರು ತಮ್ಮ ಮಾತೃಭಾಷೆ, ವಿಶೇಷವಾಗಿ ತಮಿಳು ಭಾಷೆಯನ್ನು ಮೊದಲು ಕಲಿತು ಅದರಲ್ಲಿ ನಿರರ್ಗಳತೆ ಸಾಧಿಸುವುದು ಮುಖ್ಯ ಎಂದು ಹೇಳಿದರು.
ತಾವು ಶಾಲೆಯಲ್ಲಿ ಓದುತ್ತಿದ್ದ ದಿನಗಳಲ್ಲಿ ಇಂಗ್ಲಿಷ್ ಮಾತನಾಡುವಾಗ ಎದುರಿಸುತ್ತಿದ್ದ ಸಮಸ್ಯೆಗಳನ್ನೂ ಧನುಷ್ ನೆನಪಿಸಿಕೊಂಡರು. ತಮ್ಮ ಮಾತುಗಳಲ್ಲಿ ವ್ಯಾಕರಣದ ತಪ್ಪುಗಳು ಹೆಚ್ಚಾಗಿದ್ದು, ಕೆಲವೊಮ್ಮೆ ವಾಕ್ಯಗಳಿಗೂ ಸರಿಯಾದ ಅರ್ಥ ಬರುತ್ತಿರಲಿಲ್ಲ ಎಂದು ಅವರು ಹೇಳಿದರು.
“ನಾವು ಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ಇಂಗ್ಲಿಷ್ ಅಷ್ಟೇನೂ ಚೆನ್ನಾಗಿರಲಿಲ್ಲ. ಆದರೆ ನಮ್ಮ ತಮಿಳು ಭಾಷೆಯ ಮೇಲೆ ಉತ್ತಮ ಹಿಡಿತವಿತ್ತು. ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಇಂದು ನಾನು ಭೇಟಿಯಾಗುವ ವಿದ್ಯಾರ್ಥಿಗಳು ಮತ್ತು ಯುವಕರಲ್ಲಿ ಬಹುತೇಕರು ಇಂಗ್ಲಿಷ್ನಲ್ಲಿ ಉತ್ತಮ ಹಿಡಿತ ಹೊಂದಿದ್ದಾರೆ. ಆದರೆ 10ರಲ್ಲಿ 8 ಮಂದಿಗೆ ತಮಿಳನ್ನು ಓದಲು ಮತ್ತು ಬರೆಯಲು ಗೊತ್ತಿಲ್ಲ. ಇದನ್ನು ನೋಡುವುದು ತುಂಬಾ ಬೇಸರದ ಸಂಗತಿ,” ಎಂದು ಧನುಷ್ ಹೇಳಿದ್ದಾರೆ.
ಕೆಲ ವರ್ಷಗಳ ಹಿಂದೆ ನಡೆದ ವಿದೇಶಿ ಸಿನಿಮಾ ಚಿತ್ರೀಕರಣದ ಸಂದರ್ಭ ನಡೆದ ಘಟನೆಯೊಂದನ್ನೂ ಅವರು ಹಂಚಿಕೊಂಡರು. ಬೆಲ್ಜಿಯಂನಲ್ಲಿ ನಡೆದ ಫ್ರೆಂಚ್ ನಿರ್ಮಾಣದ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾಗ, ತಮಗೆ ಇಂಗ್ಲಿಷ್ ಬರುತ್ತದೆ ಎಂದು ತಿಳಿದು ಚಿತ್ರತಂಡದವರು ಆಶ್ಚರ್ಯಪಟ್ಟಿದ್ದರು ಎಂದು ಅವರು ಹೇಳಿದರು.
ಅದಕ್ಕೆ ಕಾರಣವೇನು ಎಂದು ಕೇಳಿದಾಗ, “ನಿಮಗೆ ನಿಮ್ಮ ಮಾತೃಭಾಷೆ ಗೊತ್ತಿರಬೇಕು. ಇಂಗ್ಲಿಷ್ ಹೆಚ್ಚುವರಿ ಕೌಶಲ್ಯ,” ಎಂದು ಅವರು ಉತ್ತರಿಸಿದ್ದಾಗಿ ಧನುಷ್ ನೆನಪಿಸಿಕೊಂಡರು.
ಮಾತೃಭಾಷೆಯನ್ನು ಮೊದಲು ಕಲಿಯುವುದು ಅತ್ಯಗತ್ಯ. ತಮಿಳು ಗೊತ್ತಿಲ್ಲ ಎಂದು ಹೇಳಿಕೊಳ್ಳುವುದು ಹೆಮ್ಮೆಯ ವಿಷಯವಲ್ಲ ಎಂದು ಧನುಷ್ ವಿದ್ಯಾರ್ಥಿಗಳಿಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ತಮ್ಮ ತಮಿಳು ಶಿಕ್ಷಕರೊಂದಿಗಿನ ಹಳೆಯ ನೆನಪುಗಳನ್ನೂ ಅವರು ಹಂಚಿಕೊಂಡರು.
ಧನುಷ್ ಅವರ ಹೆಸರಿನಲ್ಲಿ ನಿರ್ಮಿಸಲಾಗಿರುವ ನೂತನ ಕಟ್ಟಡಕ್ಕೆ ‘ಧನುಷ್ ಬ್ಲಾಕ್’ ಎಂದು ಹೆಸರಿಡಲಾಗಿದೆ. ಮಂಗಳವಾರ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಧನುಷ್ ಅವರ ಮಾಜಿ ಸಹಪಾಠಿಗಳು, ಶಿಕ್ಷಕರು ಹಾಗೂ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.
ಸಿನಿಮಾ ಕೆಲಸಗಳತ್ತ ಧನುಷ್
ವೃತ್ತಿಜೀವನದ ವಿಚಾರಕ್ಕೆ ಬಂದರೆ, ಧನುಷ್ ಕೊನೆಯದಾಗಿ ವಿಗ್ನೇಶ್ ರಾಜಾ ನಿರ್ದೇಶನದ ‘ಕಾರಾ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ.
ನಿರ್ದೇಶಕ ರಾಜ್ಕುಮಾರ್ ಪೆರಿಯಸಾಮಿ ಅವರೊಂದಿಗೆ ಧನುಷ್ ನಟಿಸುತ್ತಿರುವ ‘ಓಂ’ (D55) ಚಿತ್ರದ ಚಿತ್ರೀಕರಣ ಅಂತಿಮ ಹಂತದಲ್ಲಿದೆ. ಚಿತ್ರದಲ್ಲಿ ಮಮ್ಮೂಟ್ಟಿ, ಶ್ರೀಲೀಲಾ ಹಾಗೂ ಸಾಯಿ ಪಲ್ಲವಿ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಇನ್ನು D56 ಚಿತ್ರವನ್ನು ‘ಲಬ್ಬರ್ ಪಂದು’ ಖ್ಯಾತಿಯ ನಿರ್ದೇಶಕ ತಮಿಳರಸನ್ ಪಚ್ಚಮುತ್ತು ನಿರ್ದೇಶಿಸಲಿದ್ದಾರೆ.
‘ಕರ್ಣನ್’ ಬಳಿಕ ನಿರ್ದೇಶಕ ಮಾರಿ ಸೆಲ್ವರಾಜ್ ಅವರೊಂದಿಗೆ ಧನುಷ್ ಮತ್ತೊಮ್ಮೆ ಕೈಜೋಡಿಸುತ್ತಿದ್ದು, ಈ ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ ಸಂಯೋಜಿಸಲಿದ್ದಾರೆ.
ಇದೇ ವೇಳೆ, ಧನುಷ್ ಮತ್ತು ನಿರ್ದೇಶಕ ವೆಟ್ರಿಮಾರನ್ ಮತ್ತೊಮ್ಮೆ ಒಂದಾಗಲಿರುವ ‘ತಮಿಳ್ ಮುರುಗನ್’ ಚಿತ್ರವೂ ಘೋಷಣೆಯಾಗಿದೆ. ಖ್ಯಾತ ಲೇಖಕ ಅರಿವುಮತಿ ಚಿತ್ರಕ್ಕೆ ಕಥೆ-ಬರಹದ ಜವಾಬ್ದಾರಿ ವಹಿಸಲಿದ್ದಾರೆ.


