ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತೆ ತೀವ್ರಗೊಂಡಿದ್ದು, ಅಲ್ಪ ವಿರಾಮದ ಬಳಿಕ ಅಮೆರಿಕ ಇರಾನ್ನೊಳಗಿನ ಗುರಿಗಳ ಮೇಲೆ ವಾಯುದಾಳಿಗಳನ್ನು ಪುನರಾರಂಭಿಸಿದೆ. ಈ ಕ್ರಮವು ಈ ವಾರದ ಆರಂಭದಲ್ಲಿ ಇರಾನ್, ಜೋರ್ಡನ್ನಲ್ಲಿರುವ ಅಮೆರಿಕದ ಸೇನಾ ನೆಲೆಯ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದ ಬೆನ್ನಲ್ಲೇ ನಡೆದಿದೆ.
ಅಮೆರಿಕದ ಕೇಂದ್ರ ಕಮಾಂಡ್ (CENTCOM) ನೀಡಿರುವ ಮಾಹಿತಿಯ ಪ್ರಕಾರ, ಇರಾನ್ ಉಡಾಯಿಸಿದ ಎಲ್ಲಾ ಕ್ಷಿಪಣಿಗಳನ್ನು ಯಶಸ್ವಿಯಾಗಿ ತಡೆಹಿಡಿಯಲಾಗಿದ್ದು, ಯಾವುದೇ ಹಾನಿ ಸಂಭವಿಸಿಲ್ಲ. ಈ ದಾಳಿಯನ್ನು ಅನಿರೀಕ್ಷಿತ ದಾಳಿ ಎಂದು ಸೇನೆ ಬಣ್ಣಿಸಿದ್ದು, ಕ್ಷಿಪಣಿಗಳನ್ನು ಇರಾನ್ನಿಂದಲೇ ಉಡಾಯಿಸಲಾಗಿದೆ ಎಂದು ತಿಳಿಸಿದೆ.
ಅಮೆರಿಕದ ಎಚ್ಚರಿಕೆ
ರಾಜತಾಂತ್ರಿಕ ಮಾತುಕತೆಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಅಮೆರಿಕ ತನ್ನ ವಾಯುದಾಳಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಆದರೆ, ಅಮೆರಿಕದ ಸೇನಾ ನೆಲೆಯ ಮೇಲಿನ ಇರಾನ್ನ ನೇರ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯ ನಂತರ ಪರಿಸ್ಥಿತಿ ಬದಲಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದ ಸೇನಾ ಪಡೆಗಳ ಮೇಲೆ ಯಾವುದೇ ದಾಳಿ ನಡೆದರೆ ಅದಕ್ಕೆ ಕಠಿಣ ಪ್ರತಿಕ್ರಿಯೆ ನೀಡಲಾಗುವುದು ಎಂದು ಇರಾನ್ಗೆ ಎಚ್ಚರಿಕೆ ನೀಡಿದ್ದಾರೆ.
ಇರಾಕ್ನಲ್ಲೂ ಜಂಟಿ ಕಾರ್ಯಾಚರಣೆ
ಇದರ ನಡುವೆ ಅಮೆರಿಕ ಮತ್ತು ಸೌದಿ ಅರೇಬಿಯಾ ಸೇನೆಗಳು ಇರಾಕ್ನಲ್ಲಿ ಇರಾನ್ ಬೆಂಬಲಿತ ಮಿಲಿಷಿಯಾ ಸಂಘಟನೆಗಳ ವಿರುದ್ಧ ಜಂಟಿ ವಾಯುದಾಳಿ ನಡೆಸಿವೆ.
ಪಾಪ್ಯುಲರ್ ಮೊಬಿಲೈಸೇಶನ್ ಫೋರ್ಸಸ್ (PMF) ನೀಡಿರುವ ಮಾಹಿತಿಯಂತೆ, ಈ ದಾಳಿಯಲ್ಲಿ ಕನಿಷ್ಠ 20 ಮಂದಿ ಮೃತಪಟ್ಟಿದ್ದಾರೆ. ಕಳೆದ ಮೂರು ದಿನಗಳಲ್ಲಿ ಅಮೆರಿಕದ ಸೇನಾ ಪಡೆಗಳು ಹಾಗೂ ಸೌದಿ ಅರೇಬಿಯಾದ ತೈಲ ಸ್ಥಾವರಗಳ ಮೇಲೆ 30ಕ್ಕೂ ಹೆಚ್ಚು ಡ್ರೋನ್ ದಾಳಿಗಳ ಪ್ರಯತ್ನ ನಡೆದ ಹಿನ್ನೆಲೆಯಲ್ಲಿ ಶಸ್ತ್ರಾಸ್ತ್ರ ಗೋದಾಮುಗಳು ಮತ್ತು ಲಾಜಿಸ್ಟಿಕ್ಸ್ ಕೇಂದ್ರಗಳನ್ನು ಗುರಿಯಾಗಿಸಿ ಕಾರ್ಯಾಚರಣೆ ನಡೆಸಲಾಗಿದೆ ಎಂದು CENTCOM ತಿಳಿಸಿದೆ.
ಸೌದಿ ತೈಲ ಸ್ಥಾವರಗಳತ್ತ ಡ್ರೋನ್ ದಾಳಿ ಪ್ರಯತ್ನ
ಸೌದಿ ಅರೇಬಿಯಾವು ತನ್ನ ಪೂರ್ವ ಪ್ರಾಂತ್ಯದಲ್ಲಿರುವ ತೈಲ ಸ್ಥಾವರಗಳನ್ನು ಗುರಿಯಾಗಿಸಿಕೊಂಡು ಬಂದ ಹಲವು ಡ್ರೋನ್ಗಳನ್ನು ಹೊಡೆದುರುಳಿಸಿರುವುದಾಗಿ ತಿಳಿಸಿದೆ. ಈ ದಾಳಿಗಳ ಹಿಂದೆ ಇರಾಕ್ನಲ್ಲಿರುವ ಇರಾನ್ ಬೆಂಬಲಿತ ಸಂಘಟನೆಗಳ ಕೈವಾಡವಿದೆ ಎಂದು ಸೌದಿ ಆರೋಪಿಸಿದೆ.
ಮಾತುಕತೆ ನಡುವೆಯೇ ಹೆಚ್ಚಿದ ಸಂಘರ್ಷ
ಪ್ರಾದೇಶಿಕ ಮಧ್ಯವರ್ತಿಗಳ ಮೂಲಕ ಅಮೆರಿಕ ಮತ್ತು ಇರಾನ್ ನಡುವೆ ಪರೋಕ್ಷ ರಾಜತಾಂತ್ರಿಕ ಮಾತುಕತೆಗಳು ಮುಂದುವರಿದಿದ್ದರೂ, ಇತ್ತೀಚಿನ ಬೆಳವಣಿಗೆಗಳು ಎರಡೂ ದೇಶಗಳ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿವೆ.
ಕಳೆದ ವಾರ ಅಮೆರಿಕ ರಾಜತಾಂತ್ರಿಕ ಪರಿಹಾರಕ್ಕಾಗಿ ತನ್ನ ವಾಯುದಾಳಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಮಾತುಕತೆಗಳು ಉತ್ತಮವಾಗಿ ಸಾಗುತ್ತಿವೆ ಎಂದು ಅಧ್ಯಕ್ಷ ಟ್ರಂಪ್ ಹೇಳಿದ್ದರೂ, ಅವು ವಿಫಲವಾದರೆ ಮತ್ತೆ ಸೇನಾ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದರು. ಇದೇ ವೇಳೆ, ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಶ್ವೇತಭವನದಲ್ಲಿ ನಡೆದ ಸಭೆಯಲ್ಲೂ ಇರಾನ್ ಕುರಿತ ಪರಿಸ್ಥಿತಿಯ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದ್ದರು.


