ಶ್ರೀನಗರ: ಜಮ್ಮು-ಕಾಶ್ಮೀರದ ಪ್ರಸಿದ್ಧ ಶ್ರೀ ಅಮರನಾಥ ಯಾತ್ರೆ ಅಂಗವಾಗಿ ಪವಿತ್ರ ‘ಛಡ್ರಿ ಮುಬಾರಕ್’ (Charri Mubarak) ದಂಡದ ವಾರ್ಷಿಕ ಯಾತ್ರೆಗೆ ಗುರು ಪೂರ್ಣಿಮೆ (ಆಷಾಢ ಪೂರ್ಣಿಮೆ) ಪ್ರಯುಕ್ತ ಮಂಗಳವಾರ ಅಧಿಕೃತ ಚಾಲನೆ ನೀಡಲಾಯಿತು.
ಶ್ರೀನಗರದ ಮೈಸುಮಾ ಪ್ರದೇಶದಲ್ಲಿರುವ ಐತಿಹಾಸಿಕ ದಶನಾಮಿ ಅಖಾಡದಿಂದ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪವಿತ್ರ ದಂಡವನ್ನು ಭಕ್ತಿಭಾವದಿಂದ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.
ಛಡ್ರಿ ಮುಬಾರಕ್‌ನ ಸಂರಕ್ಷಕರಾದ ಮಹಂತ್ ದೀಪೇಂದ್ರ ಗಿರಿ ಅವರ ನೇತೃತ್ವದಲ್ಲಿ ಆರಂಭವಾದ ಈ ಪವಿತ್ರ ಯಾತ್ರೆ, ಸಾಂಪ್ರದಾಯಿಕ ಮಾರ್ಗವಾದ ಪಹಲ್ಗಾಮ್, ಚಂದನ್ವಾರಿ, ಶೇಷನಾಗ್ ಹಾಗೂ ಪಂಚತರಣಿ ಮೂಲಕ ಸಾಗಲಿದ್ದು, ಶ್ರಾವಣ ಪೂರ್ಣಿಮೆ (ರಕ್ಷಾಬಂಧನ) ದಿನದಂದು ಶ್ರೀ ಅಮರನಾಥ ಗುಹಾ ದೇವಾಲಯವನ್ನು ತಲುಪಲಿದೆ.
ಯಾತ್ರೆಯ ಸಮಾರೋಪದ ಅಂಗವಾಗಿ ಶ್ರಾವಣ ಪೂರ್ಣಿಮೆಯಂದು ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳು ನೆರವೇರಲಿದ್ದು, ಇದರೊಂದಿಗೆ ಈ ವರ್ಷದ ಅಮರನಾಥ ಯಾತ್ರೆ ಅಧಿಕೃತವಾಗಿ ಪೂರ್ಣಗೊಳ್ಳಲಿದೆ.
ಪ್ರತಿ ವರ್ಷ ಸಾವಿರಾರು ಭಕ್ತರು ಈ ಪವಿತ್ರ ಯಾತ್ರೆಯಲ್ಲಿ ಭಾಗವಹಿಸಿ, ಹಿಮಲಿಂಗದ ದರ್ಶನ ಪಡೆದು ಶಿವನ ಆಶೀರ್ವಾದ ಪಡೆಯುತ್ತಾರೆ.


