ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಟ ಧನುಷ್ ರಾಜಕೀಯಕ್ಕೆ ಪ್ರವೇಶಿಸಲಿದ್ದಾರೆ ಎಂಬ ಊಹಾಪೋಹಗಳು ಕಳೆದ ಕೆಲವು ವಾರಗಳಿಂದ ಕೇಳಿಬರುತ್ತಿದ್ದು, ಇತ್ತೀಚಿನ ಅವರ ಭಾಷಣ ಈ ಚರ್ಚೆಗೆ ಮತ್ತಷ್ಟು ಬಲ ನೀಡಿದೆ. ಆದರೆ, ರಾಜಕೀಯ ಪ್ರವೇಶದ ಬಗ್ಗೆ ಧನುಷ್ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.
ಇತ್ತೀಚೆಗೆ ಅಭಿಮಾನಿಗಳು ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಧನುಷ್, ಅಭಿಮಾನಿಗಳ ಒಗ್ಗಟ್ಟನ್ನು ಸಮಾಜದ ಒಳಿತಿಗಾಗಿ ಬಳಸುವಂತೆ ಕರೆ ನೀಡಿದರು.
“ಇಷ್ಟು ಜನ ಒಂದೇ ಕಡೆ ಸೇರಿರುವುದು ದೊಡ್ಡ ಶಕ್ತಿ. ಈ ಒಗ್ಗಟ್ಟಿಗೆ ಸಕಾರಾತ್ಮಕ ದಿಕ್ಕು ಮತ್ತು ಉದ್ದೇಶ ಇರಬೇಕು. ಕೇವಲ ಆಡಿಯೊ ಬಿಡುಗಡೆ ಅಥವಾ ಅಭಿಮಾನಿಗಳ ಸಮಾವೇಶಕ್ಕೆ ಮಾತ್ರ ಸೀಮಿತವಾಗಬೇಡಿ. ಕೈಜೋಡಿಸಿ ಹೆಚ್ಚು ಸಮಾಜಸೇವಾ ಕಾರ್ಯಗಳಲ್ಲಿ ತೊಡಗಿಕೊಳ್ಳಿ. ನಿಮ್ಮ ಪ್ರದೇಶದ ಜನರಿಗೆ ಮತ್ತು ಸುತ್ತಮುತ್ತಲಿನ ಕುಟುಂಬಗಳಿಗೆ ಸಾಧ್ಯವಾದಷ್ಟು ಸಹಾಯ ಮಾಡಿ. ನಿಮ್ಮ ಬಗ್ಗೆ ನನಗೆ ಇನ್ನಷ್ಟು ಹೆಮ್ಮೆ ಆಗುವಂತೆ ಕೆಲಸ ಮಾಡಿ,” ಎಂದು ಧನುಷ್ ಹೇಳಿದರು.
ಈ ಭಾಷಣದಲ್ಲಿ ರಾಜಕೀಯ ಪ್ರವೇಶದ ಬಗ್ಗೆ ಅವರು ಯಾವುದೇ ಸ್ಪಷ್ಟ ಉಲ್ಲೇಖ ಮಾಡದಿದ್ದರೂ, ಅಭಿಮಾನಿಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ರಾಜಕೀಯ ಪ್ರವೇಶದ ಪರೋಕ್ಷ ಸಂದೇಶ ಎಂದು ಹಲವರು ವಿಶ್ಲೇಷಿಸುತ್ತಿದ್ದಾರೆ.
ಇತ್ತೀಚೆಗೆ ಧನುಷ್ ಅವರ ಅಭಿಮಾನಿ ಸಂಘವು ಹೊಸ ಧ್ವಜವನ್ನು ಅನಾವರಣಗೊಳಿಸಿದ್ದರಿಂದಲೇ ರಾಜಕೀಯ ಪ್ರವೇಶದ ಕುರಿತ ಊಹಾಪೋಹಗಳು ಜೋರಾಗಿದ್ದವು. ಈಗಿನ ಭಾಷಣದ ಬಳಿಕ ಆ ಚರ್ಚೆ ಮತ್ತಷ್ಟು ತೀವ್ರಗೊಂಡಿದೆ. ಕೆಲವರು, ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರ ಮಾದರಿಯಲ್ಲಿ ಸಮಾಜಸೇವಾ ಚಟುವಟಿಕೆಗಳು ಹಾಗೂ ಅಭಿಮಾನಿ ಬಳಗದ ಮೂಲಕ ಧನುಷ್ ರಾಜಕೀಯಕ್ಕೆ ಬರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಈ ಬಗ್ಗೆ ಈ ಹಿಂದೆ ಧನುಷ್ ಅವರ ತಂದೆ, ಹಿರಿಯ ನಿರ್ದೇಶಕ ಹಾಗೂ ನಟ ಕಸ್ತೂರಿ ರಾಜಾ ಅವರನ್ನು ಪ್ರಶ್ನಿಸಿದಾಗ, “ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ಆ ಪ್ರಶ್ನೆಯನ್ನು ಧನುಷ್ ಅವರನ್ನೇ ಕೇಳಬೇಕು,” ಎಂದು ಪ್ರತಿಕ್ರಿಯಿಸಿದ್ದರು.
ಸರಣಿ ಚಿತ್ರಗಳಲ್ಲಿ ಬ್ಯುಸಿ ಧನುಷ್
ರಾಜಕೀಯ ಊಹಾಪೋಹಗಳ ನಡುವೆಯೇ ಧನುಷ್ ಹಲವು ಮಹತ್ವದ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ನಿರ್ದೇಶಕ ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ ‘ಓಂ (D55)’ ಚಿತ್ರದಲ್ಲಿ ಅವರು ನಟಿಸುತ್ತಿದ್ದು, ಮಮ್ಮೂಟ್ಟಿ, ಶ್ರೀಲೀಲಾ ಮತ್ತು ಸಾಯಿ ಪಲ್ಲವಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದರ ಜೊತೆಗೆ ‘D56’ ಚಿತ್ರವನ್ನು ‘ಲಬ್ಬರ್ ಪಾಂಧು’ ಖ್ಯಾತಿಯ ತಮಿಳರಸನ್ ಪಚ್ಚಮುತು ನಿರ್ದೇಶಿಸಲಿದ್ದಾರೆ. ‘ಕರ್ಣನ್’ ಬಳಿಕ ನಿರ್ದೇಶಕ ಮಾರಿ ಸೆಲ್ವರಾಜ್ ಅವರೊಂದಿಗೆ ಧನುಷ್ ಮತ್ತೆ ಕೈಜೋಡಿಸುತ್ತಿದ್ದು, ಆ ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ ಸಂಯೋಜಿಸಲಿದ್ದಾರೆ.
ಇತ್ತೀಚೆಗಷ್ಟೇ ವೆಟ್ರಿಮಾರನ್ ಮತ್ತು ಧನುಷ್ ಮತ್ತೊಮ್ಮೆ ‘ತಮಿಳ್ ಮುರುಗನ್’ ಚಿತ್ರದ ಮೂಲಕ ಒಂದಾಗಲಿದ್ದಾರೆ ಎಂಬ ಘೋಷಣೆ ಹೊರಬಿದ್ದಿದೆ. ಖ್ಯಾತ ಲೇಖಕ ಅರಿವುಮತಿ ಈ ಚಿತ್ರದ ಕಥೆಗಾರರಾಗಿದ್ದಾರೆ.
ಇದಲ್ಲದೆ, ಪಿ.ಎಸ್. ಮಿತ್ರನ್ ಹಾಗೂ ಸಂಜಯ್ ಲೀಲಾ ಬನ್ಸಾಲಿ ನಿರ್ಮಾಣದ ಮತ್ತೊಂದು ಚಿತ್ರ, ನಿರ್ದೇಶಕ ಶಿವ ಅವರೊಂದಿಗೆ ಮತ್ತೊಂದು ಸಿನಿಮಾ ಹಾಗೂ ಇಳಯರಾಜಾ ಮತ್ತು ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಜೀವನಾಧಾರಿತ ಚಿತ್ರಗಳಲ್ಲೂ ಧನುಷ್ ನಟಿಸಲಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಆದರೆ, ಈ ಯೋಜನೆಗಳ ಕುರಿತು ಇನ್ನೂ ಅಧಿಕೃತ ಮಾಹಿತಿ ಪ್ರಕಟವಾಗಿಲ್ಲ.


