ಬೆಂಗಳೂರು: ‘ಕಾಂತಾರ’ ಚಿತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕನ್ನಡದ ಖ್ಯಾತ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಇದೀಗ ಹಾಲಿವುಡ್ನ ಜನಪ್ರಿಯ ಸೂಪರ್ಹೀರೋ ಸ್ಪೈಡರ್ಮ್ಯಾನ್ ಜೊತೆ ವಿಶೇಷವಾಗಿ ಕೈಜೋಡಿಸಿದ್ದಾರೆ. ಸೋನಿ ಪಿಕ್ಚರ್ಸ್ ಎಂಟರ್ಟೈನ್ಮೆಂಟ್ ನಿರ್ಮಿಸಿರುವ ‘ಸ್ಪೈಡರ್ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ (Spider-Man: Brand New Day) ಚಿತ್ರದ ಪ್ರಚಾರ ಅಭಿಯಾನದಲ್ಲಿ ರಿಷಬ್ ಭಾಗಿಯಾಗಿದ್ದಾರೆ.
ರಿಷಬ್–ಪೀಟರ್ ಪಾರ್ಕರ್ ವಿಶೇಷ ಪ್ರೋಮೋ
ಸೋನಿ ಪಿಕ್ಚರ್ಸ್ ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ರಿಷಬ್ ಶೆಟ್ಟಿ ಅಭಿನಯಿಸಿರುವ ವಿಶೇಷ ಪ್ರಚಾರ ವಿಡಿಯೊವನ್ನು ಬಿಡುಗಡೆ ಮಾಡಿದೆ. ಈ ವಿಡಿಯೊದಲ್ಲಿ ‘ಸ್ಪೈಡರ್ಮ್ಯಾನ್: ನೋ ವೇ ಹೋಮ್’ ಚಿತ್ರದ ಭಾವನಾತ್ಮಕ ಅಂತ್ಯದ ಕುರಿತು ರಿಷಬ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಜಗತ್ತಿನ ನೆನಪುಗಳಿಂದ ತಾನೇ ಅಳಿದುಹೋಗುವ ಪೀಟರ್ ಪಾರ್ಕರ್ನ ನಿರ್ಧಾರ, ಅದರ ನಂತರದ ಏಕಾಂತ ಜೀವನ ಹಾಗೂ ಸೂಪರ್ಹೀರೋ ಆಗಿರುವ ಹೊಣೆಗಾರಿಕೆಯ ಹಿಂದೆ ಅಡಗಿರುವ ತ್ಯಾಗಗಳನ್ನು ರಿಷಬ್ ವಿಡಿಯೊದಲ್ಲಿ ಮನಮುಟ್ಟುವ ರೀತಿಯಲ್ಲಿ ವಿವರಿಸಿದ್ದಾರೆ. ಈ ಪ್ರೋಮೋ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಸಾಕಷ್ಟು ಗಮನ ಸೆಳೆಯುತ್ತಿದೆ.
ಹೊಸ ಅಧ್ಯಾಯ ಆರಂಭಿಸುವ ಸ್ಪೈಡರ್ಮ್ಯಾನ್
‘ಸ್ಪೈಡರ್ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಚಿತ್ರದ ಕಥೆ ‘ಸ್ಪೈಡರ್ಮ್ಯಾನ್: ನೋ ವೇ ಹೋಮ್’ ಚಿತ್ರದ ನಂತರದ ಬೆಳವಣಿಗೆಗಳನ್ನು ಮುಂದುವರಿಸುತ್ತದೆ.
ಟಾಮ್ ಹಾಲೆಂಡ್ ಅಭಿನಯದ ಪೀಟರ್ ಪಾರ್ಕರ್, ತನ್ನ ಆಪ್ತ ಸ್ನೇಹಿತರಾದ ನೆಡ್ (ಜೇಕಬ್ ಬ್ಯಾಟಲನ್) ಮತ್ತು ಎಂ.ಜೆ. (ಜೆಂಡಯಾ) ಸೇರಿದಂತೆ ಎಲ್ಲರ ನೆನಪುಗಳಿಂದ ಮರೆಯಾಗಿರುತ್ತಾನೆ. ತನ್ನ ನಿಜವಾದ ಗುರುತನ್ನು ರಹಸ್ಯವಾಗಿಟ್ಟುಕೊಂಡೇ ನ್ಯೂಯಾರ್ಕ್ ನಗರವನ್ನು ರಕ್ಷಿಸುವ ಹೊಸ ಬದುಕು ಆರಂಭಿಸುವ ಕಥೆಯನ್ನು ಚಿತ್ರ ಒಳಗೊಂಡಿದೆ.
ಜುಲೈ 30ಕ್ಕೆ ವಿಶ್ವಾದ್ಯಂತ ಬಿಡುಗಡೆ
ಭಾರತದಲ್ಲಿಯೂ ಈ ಚಿತ್ರದ ಮುಂಗಡ ಬುಕ್ಕಿಂಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ‘ಸ್ಪೈಡರ್ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಚಿತ್ರವು ಜುಲೈ 30ರಂದು ವಿಶ್ವದಾದ್ಯಂತ ಇಂಗ್ಲಿಷ್, ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.


