ಖ್ಯಾತ ಹಾಲಿವುಡ್ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಅವರು ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ‘RRR’ ಚಿತ್ರವನ್ನು ಮುಕ್ತಕಂಠದಿಂದ ಪ್ರಶಂಸಿದ್ದು, ಭಾರತೀಯ ಸಿನಿಮಾಗಳಿಗೆ ಅಮೆರಿಕ ಸೇರಿದಂತೆ ಪಾಶ್ಚಾತ್ಯ ಮಾರುಕಟ್ಟೆಯ ಬಾಗಿಲು ತೆರೆಯುವಲ್ಲಿ ಈ ಚಿತ್ರ ಮಹತ್ವದ ಪಾತ್ರ ವಹಿಸಿದೆ ಎಂದು ಹೇಳಿದ್ದಾರೆ.
ತಮ್ಮ ಹೊಸ ಸಿನಿಮಾ ‘ದಿ ಒಡಿಸ್ಸಿ’ (The Odyssey) ಪ್ರಚಾರದ ವೇಳೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನೋಲನ್, ಭಾರತೀಯ ಕಲಾವಿದರಿಗೆ ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಅವಕಾಶಗಳು ಸಿಗುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು.
“‘RRR’ ಚಿತ್ರದಂತಹ ಯಶಸ್ಸು ಭಾರತೀಯ ಸಿನೆಮಾಗೆ ಮಹತ್ವದ ಮೈಲಿಗಲ್ಲು. ಒಂದು ಭಾರತೀಯ ಸಿನಿಮಾ ಅಮೆರಿಕದ ಮಾರುಕಟ್ಟೆಯಲ್ಲಿ ಯಶಸ್ಸು ಸಾಧಿಸಿರುವುದು ದೊಡ್ಡ ಸಾಧನೆ. ಅಮೆರಿಕ ಹಾಗೂ ಇತರೆ ಪಾಶ್ಚಾತ್ಯ ರಾಷ್ಟ್ರಗಳ ಮಾರುಕಟ್ಟೆಯನ್ನು ತಲುಪಿದರೆ, ಚಿತ್ರ ನಿರ್ಮಾಪಕರಿಗೆ ಹೊಸ ಅವಕಾಶಗಳ ಬಾಗಿಲು ತೆರೆಯುತ್ತದೆ,” ಎಂದು ನೋಲನ್ ಹೇಳಿದರು.
ಈ ಹೇಳಿಕೆಯನ್ನು ‘RRR’ ಚಿತ್ರದ ಅಧಿಕೃತ ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಳ್ಳಲಾಗಿದ್ದು, “ಭಾರತೀಯ ಸಿನೆಮಾ ಮತ್ತು ‘RRR’ ಬಗ್ಗೆ ಕ್ರಿಸ್ಟೋಫರ್ ನೋಲನ್ ಮಾತನಾಡಿರುವುದು ನಮಗೆ ಎಂದೆಂದಿಗೂ ಸ್ಮರಣೀಯ ಕ್ಷಣ” ಎಂದು ಸಂತಸ ವ್ಯಕ್ತಪಡಿಸಲಾಗಿದೆ.
2022ರಲ್ಲಿ ಬಿಡುಗಡೆಯಾದ ‘RRR’ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ವಿಶ್ವದಾದ್ಯಂತ ಭಾರೀ ಯಶಸ್ಸು ಕಂಡ ಈ ಚಿತ್ರದಲ್ಲಿನ ‘ನಾಟು ನಾಟು’ ಹಾಡು 95ನೇ ಅಕಾಡೆಮಿ ಪ್ರಶಸ್ತಿಯಲ್ಲಿ ಅತ್ಯುತ್ತಮ ಮೂಲ ಗೀತೆ (Best Original Song) ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದಿತ್ತು.
ಪ್ರಸ್ತುತ ನಿರ್ದೇಶಕ ಎಸ್.ಎಸ್. ರಾಜಮೌಳಿ, ಮಹೇಶ್ ಬಾಬು, ಪೃಥ್ವಿರಾಜ್ ಸುಕುಮಾರನ್ ಹಾಗೂ ಪ್ರಿಯಾಂಕಾ ಚೋಪ್ರಾ ಅಭಿನಯದ ತಮ್ಮ ಮುಂದಿನ ಮಹತ್ವಾಕಾಂಕ್ಷೆಯ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.
ಇದಕ್ಕೂ ಮೊದಲು ಖ್ಯಾತ ಹಾಲಿವುಡ್ ನಿರ್ದೇಶಕ ಜೇಮ್ಸ್ ಕ್ಯಾಮೆರೂನ್ ಕೂಡ ‘RRR’ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ತಾವು ಈ ಚಿತ್ರವನ್ನು ಎರಡು ಬಾರಿ ವೀಕ್ಷಿಸಿದ್ದಾಗಿ ಹೇಳಿದ್ದರು.
ಇತ್ತ, ಕ್ರಿಸ್ಟೋಫರ್ ನೋಲನ್ ಅವರ ಹೊಸ ಸಿನಿಮಾ ‘ದಿ ಒಡಿಸ್ಸಿ’ ವಿಶ್ವದಾದ್ಯಂತ ಬಿಡುಗಡೆಯಾಗಿ ಆರಂಭಿಕ ವಾರಾಂತ್ಯದಲ್ಲೇ 264 ಮಿಲಿಯನ್ ಡಾಲರ್‌ಗೂ ಅಧಿಕ ಗಳಿಕೆ ದಾಖಲಿಸಿ ಹೊಸ ದಾಖಲೆ ಬರೆದಿದೆ.


