ದೇಶದ ಹಲವು ಭಾಗಗಳಲ್ಲಿ ಮಳೆಯ ಅಬ್ಬರ ಮುಂದುವರಿದಿರುವ ಹಿನ್ನೆಲೆಯಲ್ಲಿ, ಭಾರತೀಯ ಹವಾಮಾನ ಇಲಾಖೆ (IMD) ಹಿಮಾಚಲ ಪ್ರದೇಶ, ಉತ್ತರಾಖಂಡ ಹಾಗೂ ಜಮ್ಮು-ಕಾಶ್ಮೀರಕ್ಕೆ ಮುಂದಿನ ಎರಡು ದಿನಗಳ ಕಾಲ ರೆಡ್ ಅಲರ್ಟ್ ಘೋಷಿಸಿದೆ.
ಐಎಂಡಿ ಮಾಹಿತಿ ಪ್ರಕಾರ, ಈ ರಾಜ್ಯಗಳಲ್ಲಿ ಭಾರೀದಿಂದ ಅತಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಕೆಲವೆಡೆ ಅತ್ಯಂತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಆದ್ದರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಇಂದು ದೆಹಲಿ, ಪಂಜಾಬ್, ಹರಿಯಾಣ, ಚಂಡೀಗಢ, ಉತ್ತರ ಪ್ರದೇಶ, ಬಿಹಾರ, ಅಸ್ಸಾಂ, ಮೇಘಾಲಯ, ಉಪ-ಹಿಮಾಲಯ ಪಶ್ಚಿಮ ಬಂಗಾಳ ಹಾಗೂ ಸಿಕ್ಕಿಂ ರಾಜ್ಯಗಳಲ್ಲಿ ಭಾರೀದಿಂದ ಅತಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಂದಿನ ಮೂರು ದಿನಗಳಲ್ಲಿ ಛತ್ತೀಸ್‌ಗಢ, ರಾಜಸ್ಥಾನ, ಗುಜರಾತ್, ಜಾರ್ಖಂಡ್, ಕೇರಳ, ಮಾಹೆ, ಕೊಂಕಣ, ಗೋವಾ ಹಾಗೂ ಮಧ್ಯ ಮಹಾರಾಷ್ಟ್ರ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಇದೇ ಅವಧಿಯಲ್ಲಿ ಮಧ್ಯ ಪ್ರದೇಶ, ಒಡಿಶಾ ಹಾಗೂ ಈಶಾನ್ಯ ಭಾರತದ ರಾಜ್ಯಗಳಲ್ಲಿಯೂ ಇದೇ ರೀತಿಯ ಹವಾಮಾನ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ.
ಇದಲ್ಲದೆ, ಲಡಾಖ್, ವಿದರ್ಭ, ಕರ್ನಾಟಕ, ತೆಲಂಗಾಣ, ರಾಯಲಸೀಮೆ ಹಾಗೂ ಅಂಡಮಾನ್-ನಿಕೋಬಾರ್ ದ್ವೀಪಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಗುಡುಗು-ಮಿಂಚು, ಬಿರುಗಾಳಿ ಹಾಗೂ ಬಲವಾದ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಇಂದು ಮುಂಜಾನೆ ದೆಹಲಿಯ ಕೆಲವು ಭಾಗಗಳಲ್ಲಿ ಸಾಧಾರಣದಿಂದ ಲಘು ಮಳೆಯಾಗಿದೆ. ಮುಂದಿನ ಮೂರು ದಿನಗಳಲ್ಲೂ ದೆಹಲಿಯಲ್ಲಿ ಸಾಧಾರಣದಿಂದ ಮಧ್ಯಮ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.


