ಬೆಂಗಳೂರು: ನಟ ಸತೀಶ್ ನೀನಾಸಂ ಅಭಿನಯದ ಬಹುನಿರೀಕ್ಷಿತ ‘ಅಯೋಗ್ಯ 2’ ಚಿತ್ರದ ಎರಡನೇ ಹಾಡು ‘ಅಣ್ಣ ಬಂದ್ರೆ’ ಬಿಡುಗಡೆಯಾಗಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಈ ಹಾಡು ಚಿತ್ರದಲ್ಲಿ ಸತೀಶ್ ನೀನಾಸಂ ಅವರ ಮಾಸ್ ಪರಿಚಯ ಗೀತೆಯಾಗಿ ಮೂಡಿಬಂದಿದ್ದು, ಭರ್ಜರಿ ಸಂಗೀತ, ಅದ್ದೂರಿ ನೃತ್ಯ ಸಂಯೋಜನೆ ಮತ್ತು ಉತ್ಸಾಹಭರಿತ ಗಾಯನದ ಮೂಲಕ ಗಮನ ಸೆಳೆಯುತ್ತಿದೆ.
ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ಬಹದ್ದೂರ್ ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದು, ಆಂಟನಿ ದಾಸನ್ ಅವರ ಎನರ್ಜಿ ತುಂಬಿದ ಗಾಯನ ಹಾಡಿನ ವಿಶೇಷತೆ. ನೃತ್ಯ ನಿರ್ದೇಶಕ ಸಂತೋಷ್ ಅವರ ಸಂಯೋಜನೆಯಲ್ಲಿ, ಸತೀಶ್ ನೀನಾಸಂ ಅವರೊಂದಿಗೆ ನೂರಾರು ಕಲಾವಿದರು ಹೆಜ್ಜೆ ಹಾಕಿರುವ ದೃಶ್ಯಗಳು ಹಾಡಿನ ಆಕರ್ಷಣೆಯನ್ನು ಹೆಚ್ಚಿಸಿವೆ.
ಈ ಹಿಂದೆ ಬಿಡುಗಡೆಯಾಗಿದ್ದ ‘ಮುದ್ದು ಮುದ್ದು ಪುಟ್ಟ ಲಕ್ಷ್ಮಿ’ ಹಾಡು ಉತ್ತಮ ಪ್ರತಿಕ್ರಿಯೆ ಪಡೆದಿದ್ದು, ಇದೀಗ ‘ಅಣ್ಣ ಬಂದ್ರೆ’ ಹಾಡು ಚಿತ್ರದ ಮೇಲಿನ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.
ಮೊದಲ ಭಾಗದ ಕಥೆ ಮುಂದುವರಿಯಲಿದೆ
ಚಿತ್ರದ ಬಗ್ಗೆ ಮಾತನಾಡಿರುವ ನಿರ್ದೇಶಕ ಮಹೇಶ್ ಕುಮಾರ್, ‘ಅಯೋಗ್ಯ 2’ ಮೊದಲ ಭಾಗ ಮುಕ್ತಾಯವಾದ ಮರುದಿನದಿಂದಲೇ ಕಥೆ ಆರಂಭವಾಗುತ್ತದೆ ಎಂದು ತಿಳಿಸಿದ್ದಾರೆ.
ಮೊದಲ ಭಾಗದ ಬಹುತೇಕ ಪಾತ್ರಗಳು ಮುಂದುವರಿಯಲಿದ್ದು, ಕೇವಲ ಎರಡು ಅಥವಾ ಮೂರು ಹೊಸ ಪಾತ್ರಗಳು ಮಾತ್ರ ಸೇರ್ಪಡೆಯಾಗಿವೆ. ಗ್ರಾಮ ಪಂಚಾಯಿತಿ ಸದಸ್ಯನಾಗಿರುವ ಸಿದ್ದೇಗೌಡ ಪಾತ್ರದ ಹೊಸ ಜವಾಬ್ದಾರಿಗಳು ಹಾಗೂ ಸವಾಲುಗಳ ಸುತ್ತ ಕಥೆ ಸಾಗಲಿದೆ ಎಂದು ಅವರು ಹೇಳಿದ್ದಾರೆ.
ಎಸ್ವಿಸಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಎಂ. ಮುನೇಗೌಡ ನಿರ್ಮಿಸಿರುವ ಈ ಚಿತ್ರವು ಆಗಸ್ಟ್ 7ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಚಿತ್ರದಲ್ಲಿ ರವಿಶಂಕರ್, ಸಾಧು ಕೋಕಿಲ, ತಬಲಾ ನಾಣಿ, ಸುಂದರ್ ರಾಜ್, ಶಿವರಾಜ್ ಕೆ.ಆರ್. ಪೇಟೆ, ಅರುಣಾ ಬಾಲರಾಜ್, ಗಿರಿ ಶಿವಣ್ಣ ಹಾಗೂ ಮಂಜು ಪಾವಗಡ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಚಿತ್ರಕ್ಕೆ ಮಸ್ತಿ ಉಪ್ಪಾರಹಳ್ಳಿ ಸಂಭಾಷಣೆ ಬರೆದಿದ್ದು, ವಿಶ್ವಜಿತ್ ರಾವ್ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ ಹಾಗೂ ಅರ್ಜುನ್ ರಾಜ್ ಸಾಹಸ ನಿರ್ದೇಶನವಿದೆ.


