ನವದೆಹಲಿ: ಮಾಜಿ ಕೇಂದ್ರ ಸಚಿವ, ಖ್ಯಾತ ಶಿಕ್ಷಣ ತಜ್ಞ, ದೂರದೃಷ್ಟಿಯ ಚಿಂತಕ ಹಾಗೂ ರಾಷ್ಟ್ರಭಕ್ತ ನಾಯಕ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ 125ನೇ ಜನ್ಮಜಯಂತಿ ಅಂಗವಾಗಿ ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು ಇಂದು ಗೌರವ ನಮನ ಸಲ್ಲಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ಓಂ ಬಿರ್ಲಾ, ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಜೀವನವು ರಾಷ್ಟ್ರಸೇವೆ ಮತ್ತು ರಾಷ್ಟ್ರೀಯ ಏಕತೆಗೆ ಅಚಲ ಬದ್ಧತೆಯ ಪ್ರತೀಕವಾಗಿದೆ ಎಂದು ಹೇಳಿದರು.
ಶಿಕ್ಷಣ ತಜ್ಞರಾಗಿ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಗಳು ಅಮೂಲ್ಯವಾಗಿದ್ದು, ಸಾರ್ವಜನಿಕ ನಾಯಕರಾಗಿ ರಾಷ್ಟ್ರಹಿತ, ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ದೇಶದ ಏಕತೆಗೆ ಅವರು ಸದಾ ಬದ್ಧರಾಗಿದ್ದರು ಎಂದು ಬಿರ್ಲಾ ಸ್ಮರಿಸಿದರು.
ತಮ್ಮ ಚಿಂತನೆ ಮತ್ತು ಕಾರ್ಯಗಳ ಮೂಲಕ ಬಲಿಷ್ಠ, ಸೌಹಾರ್ದಯುತ, ಸ್ವಾವಲಂಬಿ ಭಾರತದ ಪರಿಕಲ್ಪನೆಯನ್ನು ಇನ್ನಷ್ಟು ಬಲಪಡಿಸಿದ ಮಹಾನ್ ನಾಯಕ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಎಂದು ಅವರು ಬಣ್ಣಿಸಿದರು.
ರಾಷ್ಟ್ರದ ಏಕತೆ, ಅಖಂಡತೆ ಹಾಗೂ ಜನಕಲ್ಯಾಣಕ್ಕಾಗಿ ಡಾ. ಮುಖರ್ಜಿ ತೋರಿದ ಸಮರ್ಪಣೆ ಇಂದಿಗೂ ಪ್ರತಿಯೊಬ್ಬ ಭಾರತೀಯನಿಗೂ ಸ್ಫೂರ್ತಿಯಾಗಿದೆ ಎಂದು ಲೋಕಸಭಾಧ್ಯಕ್ಷ ಓಂ ಬಿರ್ಲಾ ಹೇಳಿದ್ದಾರೆ.


