ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಭಾರತೀಯ ಚುನಾವಣಾ ಆಯೋಗವು ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಹರಿಯಾಣ, ನಾಗಾಲ್ಯಾಂಡ್ ಹಾಗೂ ದೆಹಲಿಯಲ್ಲಿ ವಿವಿಧ ಹಂತಗಳ ಗಡುವನ್ನು ವಿಸ್ತರಿಸಿದೆ. ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಐದು ರಾಜ್ಯಗಳಲ್ಲಿ ಅಂತಿಮ ಮತದಾರರ ಪಟ್ಟಿ ನವೆಂಬರ್ 30ರಂದು ಪ್ರಕಟವಾಗಲಿದ್ದು, ದೆಹಲಿಯಲ್ಲಿ ಡಿಸೆಂಬರ್ 22ರಂದು ಬಿಡುಗಡೆಯಾಗಲಿದೆ.
ಚುನಾವಣಾ ಆಯೋಗದ ಪರಿಷ್ಕೃತ ವೇಳಾಪಟ್ಟಿಯಂತೆ, ಮಹಾರಾಷ್ಟ್ರದಲ್ಲಿ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಅವಧಿಯನ್ನು ನವೆಂಬರ್ 13ರವರೆಗೆ ವಿಸ್ತರಿಸಲಾಗಿದೆ. ಸಲ್ಲಿಕೆಯಾದ ಅರ್ಜಿಗಳು ಮತ್ತು ಆಕ್ಷೇಪಣೆಗಳ ಪರಿಶೀಲನೆ ಹಾಗೂ ವಿಲೇವಾರಿ ಪ್ರಕ್ರಿಯೆ ನವೆಂಬರ್ 25ರವರೆಗೆ ಮುಂದುವರಿಯಲಿದೆ.
ನಾಗಾಲ್ಯಾಂಡ್ನಲ್ಲಿ ಅರ್ಜಿಗಳು ಮತ್ತು ಆಕ್ಷೇಪಣೆಗಳ ವಿಲೇವಾರಿಗೆ ನವೆಂಬರ್ 25ರವರೆಗೆ ಕಾಲಾವಕಾಶ ನೀಡಲಾಗಿದೆ. ಆಂಧ್ರಪ್ರದೇಶ ಮತ್ತು ಹರಿಯಾಣದಲ್ಲಿ ಈ ಪ್ರಕ್ರಿಯೆ ನವೆಂಬರ್ 20ರವರೆಗೆ ನಡೆಯಲಿದೆ. ತೆಲಂಗಾಣದಲ್ಲಿ ವಿಲೇವಾರಿ ಪ್ರಕ್ರಿಯೆಗೆ ನವೆಂಬರ್ 26ರವರೆಗೆ ಗಡುವು ನಿಗದಿಪಡಿಸಲಾಗಿದೆ.
ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಹರಿಯಾಣ ಮತ್ತು ನಾಗಾಲ್ಯಾಂಡ್ ರಾಜ್ಯಗಳ ಅಂತಿಮ ಮತದಾರರ ಪಟ್ಟಿಯನ್ನು ನವೆಂಬರ್ 30ರಂದು ಪ್ರಕಟಿಸಲು ಆಯೋಗ ನಿರ್ಧರಿಸಿದೆ.
ದೆಹಲಿಗೆ ಡಿಸೆಂಬರ್ 22ರಂದು ಅಂತಿಮ ಪಟ್ಟಿ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಕೊನೆಯ ದಿನಾಂಕವನ್ನು ನವೆಂಬರ್ 25ರವರೆಗೆ ವಿಸ್ತರಿಸಲಾಗಿದೆ. ಈ ಅರ್ಜಿಗಳ ಪರಿಶೀಲನೆ ಮತ್ತು ವಿಲೇವಾರಿ ಪ್ರಕ್ರಿಯೆ ಡಿಸೆಂಬರ್ 15ರವರೆಗೆ ನಡೆಯಲಿದೆ. ಅಂತಿಮ ಮತದಾರರ ಪಟ್ಟಿಯನ್ನು ಡಿಸೆಂಬರ್ 22ರಂದು ಪ್ರಕಟಿಸಲಾಗುವುದು ಎಂದು ಆಯೋಗ ತಿಳಿಸಿದೆ.
ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಕಾಲಾವಕಾಶ ಕಲ್ಪಿಸುವ ಉದ್ದೇಶದಿಂದ ಈ ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ. ಪರಿಷ್ಕೃತ ದಿನಾಂಕಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸಾರ್ವಜನಿಕರಿಗೆ ಮಾಹಿತಿ ನೀಡಲಿದ್ದಾರೆ.


