ನವದೆಹಲಿ: ಹಬ್ಬಗಳ ಸಾಲು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಹಾರ ಸುರಕ್ಷತಾ ಕ್ರಮಗಳನ್ನು ಸರ್ಕಾರ ಮತ್ತಷ್ಟು ಬಿಗಿಗೊಳಿಸಿದೆ. ಪ್ರಮುಖ ಆಹಾರ ಮಾರುಕಟ್ಟೆಗಳಲ್ಲಿ ಅಧಿಕಾರಿಗಳು ತೀವ್ರ ತಪಾಸಣೆ ಮತ್ತು ಜಾರಿ ಕಾರ್ಯಾಚರಣೆಗಳನ್ನು ಕೈಗೊಂಡಿದ್ದಾರೆ.
ದೆಹಲಿಯ ಆರೋಗ್ಯ ಸಚಿವ ಡಾ. ಪಂಕಜ್ ಕುಮಾರ್ ಸಿಂಗ್ ಅವರ ಮಾಹಿತಿ ಪ್ರಕಾರ, ಈ ವಿಶೇಷ ಕಾರ್ಯಾಚರಣೆಯ ಭಾಗವಾಗಿ ಸುಮಾರು 2,300 ಕೆಜಿ ಖೋವಾ, ಧಾಪ್ ಮತ್ತು ಬೆಣ್ಣೆಯನ್ನು ವಶಪಡಿಸಿಕೊಂಡು ನಾಶಪಡಿಸಲಾಗಿದೆ.
ಕೊಳೆತ ಸ್ಥಿತಿಯಲ್ಲಿ ಆಹಾರ ಪದಾರ್ಥ ಪತ್ತೆ
ಮಜ್ನು ಕಾ ಟಿಲಾ ಪ್ರದೇಶದ ಎಂಸಿಡಿ ತ್ಯಾಜ್ಯ ವಿಲೇವಾರಿ ಸ್ಥಳದಲ್ಲಿ ಆಹಾರ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿದ ಸ್ಥಿತಿಯಲ್ಲಿ ಪತ್ತೆಯಾದ ಈ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006ರ ನಿಯಮಗಳ ಅನ್ವಯ ಅವುಗಳನ್ನು ನಾಶಪಡಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ವಶಪಡಿಸಿಕೊಂಡ ಆಹಾರ ಪದಾರ್ಥಗಳು ದುರ್ವಾಸನೆ ಬೀರುತ್ತಿದ್ದು, ಕೊಳೆಯುವ ಸ್ಥಿತಿಯಲ್ಲಿದ್ದವು. ಅಲ್ಲದೆ, ಅತ್ಯಂತ ಅಸ್ವಚ್ಛ ವಾತಾವರಣದಲ್ಲಿ ಅವುಗಳನ್ನು ವಾರಸುದಾರರಿಲ್ಲದಂತೆ ಬಿಟ್ಟುಹೋಗಿರುವುದು ತಪಾಸಣೆ ವೇಳೆ ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ.
ಹಬ್ಬದ ಅವಧಿಯಲ್ಲೂ ನಿರಂತರ ನಿಗಾ
ಹಬ್ಬದ ಸಂದರ್ಭದಲ್ಲಿ ಆಹಾರ ಪದಾರ್ಥಗಳ ಬೇಡಿಕೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ತಪಾಸಣೆಯನ್ನು ಮತ್ತಷ್ಟು ತೀವ್ರಗೊಳಿಸುವಂತೆ ಡಾ. ಪಂಕಜ್ ಕುಮಾರ್ ಸಿಂಗ್ ಅವರು ಆಹಾರ ಸುರಕ್ಷತಾ ಇಲಾಖೆಗೆ ಸೂಚಿಸಿದ್ದಾರೆ.
ಹಬ್ಬದ ಅವಧಿಯುದ್ದಕ್ಕೂ ನಿರಂತರ ತಪಾಸಣೆ, ಕಟ್ಟುನಿಟ್ಟಿನ ಮೇಲ್ವಿಚಾರಣೆ ಮತ್ತು ಆಹಾರ ಸುರಕ್ಷತಾ ನಿಯಮಗಳ ಜಾರಿ ಮುಂದುವರಿಸಬೇಕು ಎಂದು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಅಸ್ವಚ್ಛ ಪರಿಸ್ಥಿತಿಯಲ್ಲಿ ಸಂಗ್ರಹಿಸಿರುವ ಅಥವಾ ಗುಣಮಟ್ಟ ಕಳೆದುಕೊಂಡ ಆಹಾರ ಪದಾರ್ಥಗಳ ಮಾರಾಟವನ್ನು ತಡೆಯುವ ಮೂಲಕ ಸಾರ್ವಜನಿಕರಿಗೆ ಸುರಕ್ಷಿತ ಆಹಾರ ಲಭ್ಯವಾಗುವಂತೆ ನೋಡಿಕೊಳ್ಳುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ.


