ನವದೆಹಲಿ: ದೇಶಾದ್ಯಂತ ಬಾಲ ಕಾರ್ಮಿಕ ಪದ್ಧತಿಯ ವಿರುದ್ಧ ನಡೆಸಿದ ವಿಶೇಷ ರಕ್ಷಣಾ ಹಾಗೂ ಪುನರ್ವಸತಿ ಅಭಿಯಾನದಲ್ಲಿ 3,800ಕ್ಕೂ ಹೆಚ್ಚು ಮಕ್ಕಳನ್ನು ರಕ್ಷಿಸಲಾಗಿದೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (NCPCR) ತಿಳಿಸಿದೆ. ಕಾರ್ಯಾಚರಣೆಯ ಸಂದರ್ಭದಲ್ಲಿ 575ಕ್ಕೂ ಹೆಚ್ಚು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಮಾಹಿತಿ ಪ್ರಕಾರ, ಜೂನ್ 12ರಂದು ಆರಂಭಗೊಂಡಿದ್ದ ಈ ದೇಶವ್ಯಾಪಿ ಅಭಿಯಾನ ಆಗಸ್ಟ್ 31ರವರೆಗೆ ಮುಂದುವರಿಯಿತು.
ಹಲವು ಇಲಾಖೆಗಳ ಸಮನ್ವಯದಲ್ಲಿ ಕಾರ್ಯಾಚರಣೆ
ಅಭಿಯಾನದಡಿ ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳ ಆಡಳಿತ, ಜಿಲ್ಲಾಧಿಕಾರಿಗಳು, ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಹಾಗೂ ಸಂಬಂಧಿತ ಸಂಸ್ಥೆಗಳೊಂದಿಗೆ ಎನ್‌ಸಿಪಿಆರ್ ಸಮನ್ವಯ ಸಾಧಿಸಿತು.
ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದ ಮಕ್ಕಳನ್ನು ಗುರುತಿಸಿ ರಕ್ಷಿಸುವುದರ ಜತೆಗೆ, ಮಾನವ ಕಳ್ಳಸಾಗಣೆ, ಶೋಷಣೆ ಮತ್ತು ದುರುಪಯೋಗಕ್ಕೆ ಒಳಗಾಗುವ ಅಪಾಯದಲ್ಲಿದ್ದ ಮಕ್ಕಳನ್ನೂ ಗುರುತಿಸಿ ಅಗತ್ಯ ನೆರವು ಒದಗಿಸುವ ಕಾರ್ಯಕ್ಕೆ ಆದ್ಯತೆ ನೀಡಲಾಯಿತು.
ಜಿಲ್ಲಾಡಳಿತಗಳೊಂದಿಗೆ ನಿರಂತರ ಪರಿಶೀಲನೆ
ಅಭಿಯಾನದ ಅನುಷ್ಠಾನವನ್ನು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಲು ಎನ್‌ಸಿಪಿಆರ್‌ಸಿ ವಿವಿಧ ಜಿಲ್ಲಾಡಳಿತಗಳೊಂದಿಗೆ ಸಭೆಗಳನ್ನು ನಡೆಸಿತು. ರಕ್ಷಣಾ ಕಾರ್ಯಾಚರಣೆಗಳ ಪ್ರಗತಿ, ಸ್ಥಳೀಯ ಮಟ್ಟದಲ್ಲಿ ಎದುರಾದ ಸಮಸ್ಯೆಗಳು ಹಾಗೂ ಕಾರ್ಯಾಚರಣೆಯಲ್ಲಿನ ಅಡಚಣೆಗಳ ಕುರಿತು ಸಭೆಗಳಲ್ಲಿ ಪರಿಶೀಲನೆ ನಡೆಸಲಾಯಿತು.
ರಕ್ಷಿಸಲಾದ ಮಕ್ಕಳಿಗೆ ಸಂಬಂಧಿಸಿದ ಕ್ರಮ ಕೈಗೊಂಡ ವರದಿಗಳನ್ನು (Action Taken Reports) ಸಮಯಕ್ಕೆ ಸರಿಯಾಗಿ ಸಲ್ಲಿಸುವುದು ಹಾಗೂ ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳ ನಡುವಿನ ಸಮನ್ವಯವನ್ನು ಮತ್ತಷ್ಟು ಬಲಪಡಿಸುವ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಶಿಕ್ಷಣದ ಮುಖ್ಯವಾಹಿನಿಗೆ ಮರಳಿಸಲು ಒತ್ತು
ಬಾಲ ಕಾರ್ಮಿಕ ಪದ್ಧತಿಯ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳು ಸೇರಿದಂತೆ ವಿವಿಧ ಸಂವಹನ ವೇದಿಕೆಗಳ ಮೂಲಕ ಎನ್‌ಸಿಪಿಆರ್‌ಸಿ ಜಾಗೃತಿ ಮತ್ತು ಜನಸಂಪರ್ಕ ಕಾರ್ಯಕ್ರಮಗಳನ್ನು ನಡೆಸಿತು.
ಬಾಲ ಕಾರ್ಮಿಕರನ್ನು ಕಂಡುಬಂದಲ್ಲಿ ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರನ್ನು ಪ್ರೇರೇಪಿಸುವುದರ ಜತೆಗೆ, ರಕ್ಷಿಸಲಾದ ಮಕ್ಕಳಿಗೆ ಸೂಕ್ತ ಪುನರ್ವಸತಿ, ಆರೈಕೆ ಮತ್ತು ಶಿಕ್ಷಣದ ಅವಕಾಶಗಳನ್ನು ಒದಗಿಸಿ ಅವರನ್ನು ಮತ್ತೆ ಶಿಕ್ಷಣದ ಮುಖ್ಯವಾಹಿನಿಗೆ ಕರೆತರುವ ಮಹತ್ವವನ್ನು ಅಭಿಯಾನದಲ್ಲಿ ಒತ್ತಿಹೇಳಲಾಯಿತು.
ಬಾಲ ಕಾರ್ಮಿಕ ಪದ್ಧತಿಯನ್ನು ತಡೆಗಟ್ಟಲು ರಕ್ಷಣಾ ಕಾರ್ಯಾಚರಣೆಗಳ ಜತೆಗೆ ಪುನರ್ವಸತಿ ಮತ್ತು ಶಿಕ್ಷಣಕ್ಕೆ ಆದ್ಯತೆ ನೀಡುವುದು ಅತ್ಯಗತ್ಯ ಎಂದು ಸಚಿವಾಲಯ ತಿಳಿಸಿದೆ.


