ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಕೇಂದ್ರದ ಚುರುಕಿನ ಕ್ರಮ; ‘ಕಂದಾ ಎಕ್ಸ್‌ಪ್ರೆಸ್‌’ ಮೂಲಕ ಬಫರ್‌ ದಾಸ್ತಾನು ಬಿಡುಗಡೆ

2 Min Read
2 Min Read

ನವದೆಹಲಿ: ದೇಶದಲ್ಲಿ ಈರುಳ್ಳಿಯ ಸಾಕಷ್ಟು ದಾಸ್ತಾನು ಲಭ್ಯವಿದ್ದು, ಋತುಮಾನದಿಂದ ಉಂಟಾಗುವ ಬೆಲೆ ಏರಿಕೆಯ ಒತ್ತಡವನ್ನು ತಗ್ಗಿಸಲು ಕೇಂದ್ರ ಸರ್ಕಾರ ಬಫರ್‌ ದಾಸ್ತಾನಿನ ಈರುಳ್ಳಿಯನ್ನು ಹಂತ ಹಂತವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.

ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಪ್ರಕಾರ, ‘ಕಂದಾ ಎಕ್ಸ್‌ಪ್ರೆಸ್‌’ ರೈಲು ಹಾಗೂ ರಸ್ತೆ ಸಾರಿಗೆ ಮೂಲಕ ಈರುಳ್ಳಿ ಪೂರೈಕೆಯನ್ನು ಹೆಚ್ಚಿಸಲಾಗುತ್ತಿದೆ. ದೇಶದ 19 ಪ್ರಮುಖ ನಗರಗಳಲ್ಲಿ ಚಿಲ್ಲರೆ ಮಾರುಕಟ್ಟೆ ಮಧ್ಯಪ್ರವೇಶವನ್ನು ವಿಸ್ತರಿಸಲಾಗಿದ್ದು, ವ್ಯಾಪಕ ಲಭ್ಯತೆ ಖಚಿತಪಡಿಸಲು 30ಕ್ಕೂ ಹೆಚ್ಚು ಟ್ರಕ್‌ಗಳನ್ನು ವಿವಿಧ ಪ್ರದೇಶಗಳಿಗೆ ಕಳುಹಿಸಲಾಗಿದೆ.

ಎರಡು ‘ಕಂದಾ ಎಕ್ಸ್‌ಪ್ರೆಸ್‌’ ರೈಲುಗಳ ಮೂಲಕ ಪೂರೈಕೆ

ಈ ಯೋಜನೆಯಡಿ ನಾಸಿಕ್‌ನಿಂದ ಎರಡು ‘ಕಂದಾ ಎಕ್ಸ್‌ಪ್ರೆಸ್‌’ ರೈಲು ರೇಕ್‌ಗಳನ್ನು ಈಗಾಗಲೇ ರವಾನಿಸಲಾಗಿದೆ. ಮೊದಲ ರೇಕ್‌ನಲ್ಲಿ 450 ಮೆಟ್ರಿಕ್‌ ಟನ್‌ ಈರುಳ್ಳಿ ಸಾಗಿಸಲಾಗಿದ್ದು, ಅದು ದೆಹಲಿ ತಲುಪಿದೆ. ಅಲ್ಲಿಂದ ವಾರಾಣಸಿ, ಲಖನೌ, ಚಂಡೀಗಢ, ಅಮೃತಸರ ಸೇರಿದಂತೆ ದೆಹಲಿ-ಎನ್‌ಸಿಆರ್‌ ಪ್ರದೇಶಗಳಿಗೆ ಈರುಳ್ಳಿಯನ್ನು ವಿತರಿಸಲಾಗಿದೆ.

ಎರಡನೇ ರೇಕ್‌ನಲ್ಲಿ 840 ಮೆಟ್ರಿಕ್‌ ಟನ್‌ ಈರುಳ್ಳಿ ಸಾಗಿಸಲಾಗಿದ್ದು, ಅದು ನಿನ್ನೆ ಚೆನ್ನೈ ತಲುಪಿದೆ. ತಮಿಳುನಾಡಿನ ವಿವಿಧ ಜಿಲ್ಲೆಗಳಿಗೆ ಈ ದಾಸ್ತಾನನ್ನು ವಿತರಿಸುವ ಸಾಧ್ಯತೆ ಇದೆ ಎಂದು ಸಚಿವಾಲಯ ತಿಳಿಸಿದೆ.

ಇದಲ್ಲದೆ, ಮಾರುಕಟ್ಟೆಯ ಬೇಡಿಕೆ, ಬೆಲೆ ಪರಿಸ್ಥಿತಿ ಮತ್ತು ಸ್ಥಳೀಯ ಅಗತ್ಯಗಳನ್ನು ಆಧರಿಸಿ ಪ್ರಮುಖ ಬಳಕೆ ಕೇಂದ್ರಗಳಿಗೆ ರಸ್ತೆ ಮಾರ್ಗದ ಮೂಲಕ ಸುಮಾರು 1,000 ಮೆಟ್ರಿಕ್‌ ಟನ್‌ ಈರುಳ್ಳಿ ಸಾಗಿಸಲಾಗುತ್ತಿದೆ.

ರೈತರಿಗೆ ₹210 ಕೋಟಿ ನೇರ ಪಾವತಿ

ಈರುಳ್ಳಿ ರೈತರಿಗೆ ಸಮಯಕ್ಕೆ ಸರಿಯಾಗಿ ಹಣ ಪಾವತಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿದ್ದು, ಸುಮಾರು 3,400 ರೈತರಿಗೆ ₹210 ಕೋಟಿ ನೇರವಾಗಿ ಪಾವತಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ರೈತರಿಗೆ ಸೂಕ್ತ ಬೆಲೆ ಮತ್ತು ಬೆಂಬಲ ಒದಗಿಸುವುದರ ಜೊತೆಗೆ ಗ್ರಾಹಕರಿಗೆ ಸಮರ್ಪಕ ಪ್ರಮಾಣದಲ್ಲಿ ಕೈಗೆಟುಕುವ ದರದಲ್ಲಿ ಈರುಳ್ಳಿ ಲಭ್ಯವಾಗುವಂತೆ ನೋಡಿಕೊಳ್ಳುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ.

ಸಾಗಣೆ ವೇಳೆ ಭದ್ರತೆಗೆ ಕಟ್ಟುನಿಟ್ಟಿನ ಕ್ರಮ

ದೊಡ್ಡ ಪ್ರಮಾಣದ ಈರುಳ್ಳಿಯನ್ನು ರೈಲು ರೇಕ್‌ಗಳ ಮೂಲಕ ಸಾಗಿಸುವುದು ಮತ್ತು ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಂದರ್ಭದಲ್ಲಿ ಯಾವುದೇ ಸೋರಿಕೆ ಅಥವಾ ದುರ್ಬಳಕೆ ನಡೆಯದಂತೆ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗಳನ್ನು ಜಾರಿಗೊಳಿಸಲಾಗಿದೆ.

ಬಫರ್‌ ದಾಸ್ತಾನಿನಿಂದ ಈರುಳ್ಳಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಬಳಿಕ ಲಭ್ಯತೆ ಹೆಚ್ಚಾಗಿದ್ದು, ಬಿಡುಗಡೆ ಆರಂಭವಾದ ಮರುದಿನದಿಂದಲೇ ಬೆಲೆ ಇಳಿಕೆಯ ಪ್ರವೃತ್ತಿ ಕಂಡುಬಂದಿದೆ ಎಂದು ಸಚಿವಾಲಯ ತಿಳಿಸಿದೆ. ಮುಂದಿನ ದಿನಗಳಲ್ಲಿ ಪೂರೈಕೆ ಮತ್ತಷ್ಟು ಹೆಚ್ಚುವುದರಿಂದ ಈರುಳ್ಳಿ ಬೆಲೆಯಲ್ಲಿ ಸ್ಥಿರತೆ ಬರಲು ಸಹಕಾರಿಯಾಗಲಿದೆ ಎಂದು ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.

Share This Article