ಭಾರತ–ಉಜ್ಬೇಕಿಸ್ತಾನ ಬಾಂಧವ್ಯಕ್ಕೆ ಹೊಸ ಅಧ್ಯಾಯ: 11 ಒಪ್ಪಂದ, ₹5 ಬಿಲಿಯನ್ ವ್ಯಾಪಾರ ಗುರಿ

2 Min Read
2 Min Read

ತಾಷ್ಕೆಂಟ್: ಪ್ರಧಾನಿ ನರೇಂದ್ರ ಮೋದಿ ಅವರು ಉಜ್ಬೇಕಿಸ್ತಾನಕ್ಕೆ ಕೈಗೊಂಡಿದ್ದ ಎರಡು ದಿನಗಳ ಅಧಿಕೃತ ಪ್ರವಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ನಿನ್ನೆ ಭಾರತಕ್ಕೆ ಮರಳಿದ್ದಾರೆ. ಪ್ರವಾಸದ ವೇಳೆ ಉಜ್ಬೇಕಿಸ್ತಾನ ಅಧ್ಯಕ್ಷ ಶವ್ಕತ್ ಮಿರ್ಜಿಯೋಯೆವ್ ಅವರೊಂದಿಗೆ ನಡೆದ ಮಹತ್ವದ ಮಾತುಕತೆಯ ಬಳಿಕ ಭಾರತ–ಉಜ್ಬೇಕಿಸ್ತಾನ ಸಂಬಂಧವನ್ನು ‘ಸಮಗ್ರ ಕಾರ್ಯತಂತ್ರ ಪಾಲುದಾರಿಕೆ’ (Comprehensive Strategic Partnership) ಮಟ್ಟಕ್ಕೆ ಏರಿಸಲು ಉಭಯ ನಾಯಕರು ಒಪ್ಪಿಗೆ ಸೂಚಿಸಿದ್ದಾರೆ.

ಈ ಭೇಟಿಯ ಸಂದರ್ಭದಲ್ಲಿ ಒಟ್ಟು 11 ಒಪ್ಪಂದಗಳಿಗೆ ಸಹಿ ಹಾಕಲಾಗಿದ್ದು, ದ್ವಿಪಕ್ಷೀಯ ಸಂಬಂಧಗಳು ಹಲವು ಹೊಸ ಕ್ಷೇತ್ರಗಳಿಗೆ ವಿಸ್ತರಿಸುವ ರೂಪುರೇಷೆ ಸಿದ್ಧವಾಗಿದೆ. ನಿರ್ಣಾಯಕ ಖನಿಜಗಳು, ಯುರೇನಿಯಂ, ವ್ಯಾಪಾರ, ರಕ್ಷಣಾ ಸಹಕಾರ, ಡಿಜಿಟಲ್ ಪಾವತಿ ವ್ಯವಸ್ಥೆ ಹಾಗೂ ಶಿಕ್ಷಣದಿಂದ ಹಿಡಿದು ಹಿಂದಿ ಮತ್ತು ಸಂಸ್ಕೃತ ಭಾಷೆಗಳ ಉತ್ತೇಜನ, ಕ್ರೀಡೆ ಹಾಗೂ ಪರಂಪರೆ ಸಂರಕ್ಷಣೆಯವರೆಗೆ ಹಲವು ಕ್ಷೇತ್ರಗಳಲ್ಲಿ ಸಹಕಾರಕ್ಕೆ ಒತ್ತು ನೀಡಲಾಗಿದೆ.

5 ಬಿಲಿಯನ್ ಡಾಲರ್ ವ್ಯಾಪಾರ ಗುರಿ

ಭಾರತ–ಉಜ್ಬೇಕಿಸ್ತಾನ ಸಂಬಂಧವನ್ನು ಸಮಗ್ರ ಕಾರ್ಯತಂತ್ರ ಪಾಲುದಾರಿಕೆ ಮಟ್ಟಕ್ಕೆ ಏರಿಸಿರುವುದು ಹಾಗೂ 5 ಬಿಲಿಯನ್ ಡಾಲರ್ ದ್ವಿಪಕ್ಷೀಯ ವ್ಯಾಪಾರ ಗುರಿ ನಿಗದಿಪಡಿಸಿರುವುದು ಮುಂದಿನ ದಿನಗಳಲ್ಲಿ ಆರ್ಥಿಕ ಸಹಕಾರಕ್ಕೆ ಮತ್ತಷ್ಟು ವೇಗ ನೀಡುವ ನಿರೀಕ್ಷೆಯಿದೆ.

ದೀರ್ಘಾವಧಿಯ ಇಂಧನ ಸಹಕಾರ, ರಾಜ್ಯಗಳು ಹಾಗೂ ನಗರಗಳ ನಡುವಿನ ನೇರ ಸಂಪರ್ಕ ಮತ್ತು ಹೆಚ್ಚಿದ ಪರಸ್ಪರ ಸಹಕಾರದ ಮೂಲಕ ಉಜ್ಬೇಕಿಸ್ತಾನ ಮಾತ್ರವಲ್ಲದೆ ಮಧ್ಯ ಏಷ್ಯಾ ಪ್ರದೇಶದೊಂದಿಗೆ ಭಾರತದ ಸಂಬಂಧಕ್ಕೂ ಹೊಸ ಚೈತನ್ಯ ದೊರೆಯಲಿದೆ ಎಂದು ನಿರೀಕ್ಷಿಸಲಾಗಿದೆ.

ಮೋದಿಗೆ ಉಜ್ಬೇಕಿಸ್ತಾನದ ಅತ್ಯುನ್ನತ ಗೌರವ

ಪ್ರಧಾನಿ ನರೇಂದ್ರ ಮೋದಿ ಅವರ ಪ್ರವಾಸದ ಪ್ರಮುಖ ಘಟ್ಟವಾಗಿ ಉಜ್ಬೇಕಿಸ್ತಾನ ಅಧ್ಯಕ್ಷ ಶವ್ಕತ್ ಮಿರ್ಜಿಯೋಯೆವ್ ಅವರು ಅವರಿಗೆ ದೇಶದ ಅತ್ಯುನ್ನತ ರಾಜ್ಯ ಗೌರವವಾದ ‘ಆರ್ಡರ್ ಆಫ್ ಒಲಿ ದರ್ಜಾಲಿ ದೋಸ್ತ್ಲಿಕ್’ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಭಾರತ–ಉಜ್ಬೇಕಿಸ್ತಾನ ನಡುವಿನ ಸ್ನೇಹ, ಪರಸ್ಪರ ಸಹಕಾರ ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವಲ್ಲಿ ಪ್ರಧಾನಿ ಮೋದಿ ಅವರು ನೀಡಿದ ಕೊಡುಗೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ ಎಂದು ತಿಳಿಸಲಾಗಿದೆ.

ಮೋದಿ ಅವರ ಈ ಪ್ರವಾಸವು ಭಾರತ ಮತ್ತು ಉಜ್ಬೇಕಿಸ್ತಾನ ನಡುವಿನ ರಾಜತಾಂತ್ರಿಕ, ಆರ್ಥಿಕ ಹಾಗೂ ಜನರ ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಹೆಜ್ಜೆಯಾಗಿ ಪರಿಣಮಿಸಿದೆ.

Share This Article