ಅಮೆರಿಕ ಪ್ರವಾಸಕ್ಕೆ ನಿರ್ಮಲಾ ಸೀತಾರಾಮನ್: ಹೂಡಿಕೆ, ಆರ್ಥಿಕ ಸಹಕಾರಕ್ಕೆ ಒತ್ತು

3 Min Read
3 Min Read

ನವದೆಹಲಿ, ಆಗಸ್ಟ್ 28: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದಿನಿಂದ ಆರು ದಿನಗಳ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಚಿಕಾಗೊ, ಆ್ಯಶ್‌ವಿಲ್ ಮತ್ತು ನ್ಯೂಯಾರ್ಕ್ ನಗರಗಳಿಗೆ ಭೇಟಿ ನೀಡಲಿರುವ ಅವರು, ಹೂಡಿಕೆದಾರರು, ಉದ್ಯಮಿಗಳು ಹಾಗೂ ಜಾಗತಿಕ ಹಣಕಾಸು ಕ್ಷೇತ್ರದ ಪ್ರಮುಖರೊಂದಿಗೆ ಸರಣಿ ಸಭೆ ನಡೆಸಲಿದ್ದಾರೆ.

ಚಿಕಾಗೊದಲ್ಲಿ ಹೂಡಿಕೆದಾರರು, ಉದ್ಯಮಿಗಳೊಂದಿಗೆ ಸಭೆ

ಚಿಕಾಗೊದಲ್ಲಿ ಸೀತಾರಾಮನ್ ಅವರು ಪ್ರಮುಖ ಹೂಡಿಕೆದಾರರೊಂದಿಗೆ ರೌಂಡ್‌ಟೇಬಲ್ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಖಾಸಗಿ ವಲಯದ ಪ್ರಮುಖ ಕಂಪನಿಗಳ ಸಿಇಒಗಳು, ಅಧ್ಯಕ್ಷರು ಹಾಗೂ ಹಿರಿಯ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಆಯ್ದ ಕಂಪನಿಗಳ ಸಿಇಒಗಳು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಪ್ರತ್ಯೇಕ ದ್ವಿಪಕ್ಷೀಯ ಸಭೆಗಳನ್ನೂ ನಡೆಸಲಿದ್ದು, ಭಾರತದ ಹೂಡಿಕೆ ಅವಕಾಶಗಳು, ಆರ್ಥಿಕ ಬೆಳವಣಿಗೆಯ ನಿರೀಕ್ಷೆಗಳು ಹಾಗೂ ಭಾರತ–ಅಮೆರಿಕ ನಡುವಿನ ವ್ಯವಹಾರ ಮತ್ತು ಹೂಡಿಕೆ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳು ಚರ್ಚೆಯ ಪ್ರಮುಖ ವಿಷಯಗಳಾಗಲಿವೆ.

ಚಿಕಾಗೊ ವಿಶ್ವವಿದ್ಯಾಲಯದ ಪೋಲ್ಸ್ಕಿ ಸೆಂಟರ್ ಫಾರ್ ಎಂಟರ್‌ಪ್ರೆನರ್‌ಶಿಪ್ ಆ್ಯಂಡ್ ಇನೋವೇಷನ್ಗೂ ಸೀತಾರಾಮನ್ ಭೇಟಿ ನೀಡಲಿದ್ದಾರೆ. ಉದ್ಯಮಶೀಲತೆ, ನಾವೀನ್ಯತೆ, ತಂತ್ರಜ್ಞಾನ ವಾಣಿಜ್ಯೀಕರಣ ಹಾಗೂ ಭಾರತದ ವೇಗವಾಗಿ ವಿಸ್ತರಿಸುತ್ತಿರುವ ಸ್ಟಾರ್ಟ್‌ಅಪ್ ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಯೊಂದಿಗೆ ಸಂಪರ್ಕ ಬಲಪಡಿಸುವ ಕುರಿತು ಅವರು ಅಭಿಪ್ರಾಯ ವಿನಿಮಯ ನಡೆಸಲಿದ್ದಾರೆ.

ಇದೇ ವೇಳೆ ಚಿಕಾಗೊದಲ್ಲಿರುವ ಭಾರತೀಯ ಸಮುದಾಯದ ಸದಸ್ಯರೊಂದಿಗೂ ಹಣಕಾಸು ಸಚಿವೆ ಸಂವಾದ ನಡೆಸಲಿದ್ದಾರೆ.

ಜಿ20 ಸಭೆಯಲ್ಲಿ ಭಾರತದ ನಿಯೋಗದ ನೇತೃತ್ವ

ಅಮೆರಿಕದ ಜಿ20 ಅಧ್ಯಕ್ಷತೆಯಡಿ ಆ್ಯಶ್‌ವಿಲ್‌ನಲ್ಲಿ ನಡೆಯಲಿರುವ ಜಿ20 ಹಣಕಾಸು ಸಚಿವರು ಮತ್ತು ಕೇಂದ್ರ ಬ್ಯಾಂಕ್ ಗವರ್ನರ್‌ಗಳ ಸಭೆಯಲ್ಲಿ ಸೀತಾರಾಮನ್ ಭಾರತೀಯ ನಿಯೋಗವನ್ನು ಮುನ್ನಡೆಸಲಿದ್ದಾರೆ.

ಆಗಸ್ಟ್ 31 ಮತ್ತು ಸೆಪ್ಟೆಂಬರ್ 1ರಂದು ನಡೆಯಲಿರುವ ಈ ಸಭೆಯಲ್ಲಿ ಜಿ20 ರಾಷ್ಟ್ರಗಳ ಹಣಕಾಸು ಸಚಿವರು, ಕೇಂದ್ರ ಬ್ಯಾಂಕ್ ಗವರ್ನರ್‌ಗಳು ಹಾಗೂ ಹಿರಿಯ ಆರ್ಥಿಕ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಜಾಗತಿಕ ಆರ್ಥಿಕತೆ ಮತ್ತು ಹಣಕಾಸು ವ್ಯವಸ್ಥೆಗೆ ಸಂಬಂಧಿಸಿದ ಪ್ರಮುಖ ವಿಚಾರಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ.

ಇದಕ್ಕೂ ಮುನ್ನ ಆಗಸ್ಟ್ 29 ಮತ್ತು 30ರಂದು ಜಿ20 ಹಣಕಾಸು ಮತ್ತು ಕೇಂದ್ರ ಬ್ಯಾಂಕ್ ಉಪಪ್ರತಿನಿಧಿಗಳ ಸಭೆ ನಡೆಯಲಿದೆ. ಜಾಗತಿಕ ಆರ್ಥಿಕ ಸವಾಲುಗಳ ಕುರಿತು ಭಾರತದ ನಿಲುವನ್ನು ಮುಂದಿಡಲು ಹಾಗೂ ಜಿ20 ಪಾಲುದಾರ ರಾಷ್ಟ್ರಗಳೊಂದಿಗೆ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಈ ಸಭೆಗಳು ಅವಕಾಶ ಕಲ್ಪಿಸಲಿವೆ.

ನ್ಯೂಯಾರ್ಕ್‌ನಲ್ಲಿ ಹೂಡಿಕೆದಾರರೊಂದಿಗೆ ಮಾತುಕತೆ

ನ್ಯೂಯಾರ್ಕ್‌ನಲ್ಲಿ ಸೀತಾರಾಮನ್ ಅವರು ಪ್ರಮುಖ ಕಂಪನಿಗಳ ಸಿಇಒಗಳು ಹಾಗೂ ಹಿರಿಯ ಪ್ರತಿನಿಧಿಗಳೊಂದಿಗೆ ಇನ್ವೆಸ್ಟರ್ ರೌಂಡ್‌ಟೇಬಲ್ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಹಣಕಾಸು ಕ್ಷೇತ್ರದ ಪ್ರಮುಖ ಅಧಿಕಾರಿಗಳು ಮತ್ತು ಸಿಇಒಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿ, ಭಾರತದ ಹೂಡಿಕೆ ಅವಕಾಶಗಳು, ಆರ್ಥಿಕ–ಹಣಕಾಸು ಪರಿಸ್ಥಿತಿ ಹಾಗೂ ಭಾರತ–ಅಮೆರಿಕ ನಡುವಿನ ಹಣಕಾಸು ಮತ್ತು ಸಾಂಸ್ಥಿಕ ಸಂಬಂಧಗಳನ್ನು ಬಲಪಡಿಸುವ ಕುರಿತು ಚರ್ಚಿಸಲಿದ್ದಾರೆ.

ನ್ಯೂಯಾರ್ಕ್ ಪ್ರವಾಸದ ವೇಳೆ ಜಾಗತಿಕ ಎಲೆಕ್ಟ್ರಾನಿಕ್ ಷೇರು ಮಾರುಕಟ್ಟೆಯ ಪ್ರಮುಖ ವೇದಿಕೆಯಾದ ನಾಸ್ಡಾಕ್ ಆಯೋಜಿಸುವ ಬೆಲ್-ರಿಂಗಿಂಗ್ ಸಮಾರಂಭದಲ್ಲೂ ಸೀತಾರಾಮನ್ ಪಾಲ್ಗೊಳ್ಳಲಿದ್ದಾರೆ.

ಅಮೆರಿಕ ಪ್ರವಾಸವು ಸೆಪ್ಟೆಂಬರ್ 2ರಂದು ಮುಕ್ತಾಯಗೊಳ್ಳಲಿದೆ.

ಕೆನಡಾದಿಂದ ಆರಂಭವಾದ ಪ್ರವಾಸ

ಸೀತಾರಾಮನ್ ಅವರ ಒಟ್ಟು 9 ದಿನಗಳ ಕೆನಡಾ–ಅಮೆರಿಕ ಪ್ರವಾಸ ಆಗಸ್ಟ್ 25ರಂದು ಆರಂಭವಾಗಿದೆ. ಪ್ರವಾಸದ ಮೊದಲ ಹಂತದಲ್ಲಿ ಅವರು ಕೆನಡಾದೊಂದಿಗೆ ಆರ್ಥಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವತ್ತ ಗಮನ ಹರಿಸಿದ್ದಾರೆ.

ಟೊರಾಂಟೊದಲ್ಲಿ ನಡೆದ ಮೊದಲ ಭಾರತ–ಕೆನಡಾ ಆರ್ಥಿಕ ಮತ್ತು ಹಣಕಾಸು ಸಂವಾದದಲ್ಲಿ ಅವರು ಭಾಗವಹಿಸಿದ್ದರು. ಇಂಧನ, ಕೃತಕ ಬುದ್ಧಿಮತ್ತೆ ಹಾಗೂ ನಿರ್ಣಾಯಕ ಖನಿಜಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಹೂಡಿಕೆದಾರರು ಮತ್ತು ಉದ್ಯಮಿಗಳೊಂದಿಗೂ ಮಾತುಕತೆ ನಡೆಸಿದ್ದರು.

ಉಭಯ ದೇಶಗಳ ನಡುವಿನ ಆರ್ಥಿಕ ಮತ್ತು ಹಣಕಾಸು ಸಹಕಾರವನ್ನು ವಿಸ್ತರಿಸುವುದು ಹಾಗೂ ಹೆಚ್ಚಿನ ಹೂಡಿಕೆ ಮತ್ತು ವ್ಯವಹಾರ ಅವಕಾಶಗಳನ್ನು ಸೃಷ್ಟಿಸುವುದು ಈ ಚರ್ಚೆಗಳ ಪ್ರಮುಖ ಉದ್ದೇಶವಾಗಿತ್ತು.

Share This Article