ಮೈಸೂರು: ಬುಡಕಟ್ಟು ಭಾಷೆಗಳ ದಾಖಲಾತಿ, ಸಂರಕ್ಷಣೆ ಹಾಗೂ ಪುನರುಜ್ಜೀವನಕ್ಕೆ ಮತ್ತಷ್ಟು ವೇಗ ನೀಡುವ ಉದ್ದೇಶದಿಂದ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಮೈಸೂರಿನಲ್ಲಿ ಮೂರು ದಿನಗಳ ‘ಬುಡಕಟ್ಟು ಭಾಷೆಗಳು ಮತ್ತು ವಸ್ತುಸಂಗ್ರಹಾಲಯಗಳ ರಾಷ್ಟ್ರೀಯ ಸಮಾವೇಶ’ ಆಯೋಜಿಸಿದೆ. ಸೋಮವಾರದಿಂದ ಬುಧವಾರದವರೆಗೆ ನಡೆಯಲಿರುವ ಈ ಸಮಾವೇಶದಲ್ಲಿ ದೇಶದ ವಿವಿಧ ಭಾಗಗಳ ತಜ್ಞರು ಹಾಗೂ ಸಂಬಂಧಿತ ಸಂಸ್ಥೆಗಳು ಭಾಗವಹಿಸಲಿವೆ.
ದೇಶಾದ್ಯಂತ ಬುಡಕಟ್ಟು ವಸ್ತುಸಂಗ್ರಹಾಲಯಗಳು ಹಾಗೂ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ವಸ್ತುಸಂಗ್ರಹಾಲಯಗಳನ್ನು ಮತ್ತಷ್ಟು ಬಲಪಡಿಸುವ ಕುರಿತು ಸಮಾವೇಶದಲ್ಲಿ ಮಹತ್ವದ ಚರ್ಚೆಗಳು ನಡೆಯಲಿವೆ. ಬುಡಕಟ್ಟು ಸಮುದಾಯಗಳ ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಯ ಮುಖ್ಯವಾಹಿನಿಯಲ್ಲಿ ಯಾವುದೇ ಸಮುದಾಯವೂ ಹಿಂದೆ ಬೀಳದಂತೆ ನೋಡಿಕೊಳ್ಳುವ ‘ವಿಕಸಿತ ಭಾರತ–2047’ರ ದೃಷ್ಟಿಕೋನಕ್ಕೆ ಈ ಸಮಾವೇಶ ಮತ್ತಷ್ಟು ಬಲ ನೀಡಲಿದೆ.
ಸಮಾವೇಶವನ್ನು ಕೇಂದ್ರ ಬುಡಕಟ್ಟು ವ್ಯವಹಾರಗಳ ರಾಜ್ಯ ಸಚಿವ ದುರ್ಗಾದಾಸ್ ಉಯ್ಕೆ ಉದ್ಘಾಟಿಸಲಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಬುಡಕಟ್ಟು ಭಾಷೆಗಳಲ್ಲಿ ಸಿದ್ಧಪಡಿಸಲಾದ ಕರ್ನಾಟಕದ ಪ್ರಾಥಮಿಕ ಭಾಷಾ ಪಠ್ಯಪುಸ್ತಕಗಳ (ಪ್ರೈಮರ್ಗಳ) ಬಿಡುಗಡೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಮತ್ತು ಕೇಂದ್ರ ಭಾರತೀಯ ಭಾಷೆಗಳ ಸಂಸ್ಥೆ (CIIL) ನಡುವೆ ಮಹತ್ವದ ಒಡಂಬಡಿಕೆಗೆ (MoU) ಸಹಿ ಹಾಕಲಾಗುತ್ತದೆ.
ಇದಲ್ಲದೆ, ಬುಡಕಟ್ಟು ಭಾಷೆಗಳ ಬಳಕೆ ಮತ್ತು ಸಂವಹನಕ್ಕೆ ನೆರವಾಗುವ ಚಾಟ್ಬಾಟ್ಗೆ ಚಾಲನೆ ನೀಡಲಾಗುತ್ತದೆ. ಬುಡಕಟ್ಟು ಭಾಷೆಗಳ ಡಿಜಿಟಲ್ ಸಂರಕ್ಷಣೆಗಾಗಿ ರೂಪಿಸಲಾಗಿರುವ ‘ಆದಿ ವಾಣಿ’ ವೇದಿಕೆಯಲ್ಲಿ ಹಲವು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಲಾಗುತ್ತಿದ್ದು, ಅದರ ಹೊಸ iOS ಆ್ಯಪ್ ಕೂಡ ಬಿಡುಗಡೆಯಾಗಲಿದೆ.
ಆದಿ ವಾಣಿ ವೇದಿಕೆಗೆ ಇನ್ನೂ ಐದು ಹೊಸ ಭಾಷೆಗಳನ್ನು ಸೇರ್ಪಡೆಗೊಳಿಸುವುದರ ಜೊತೆಗೆ ಹಲವು ನೂತನ ಸೌಲಭ್ಯಗಳನ್ನು ಪರಿಚಯಿಸಲಾಗುತ್ತಿದೆ. ಇದರಿಂದ ದೇಶದ ಬುಡಕಟ್ಟು ಭಾಷೆಗಳ ದಾಖಲಾತಿ, ಕಲಿಕೆ, ಸಂರಕ್ಷಣೆ ಮತ್ತು ಡಿಜಿಟಲ್ ಬಳಕೆಗೆ ಮತ್ತಷ್ಟು ಉತ್ತೇಜನ ದೊರೆಯುವ ನಿರೀಕ್ಷೆಯಿದೆ.


