ನವದೆಹಲಿ: ದೇಶದಲ್ಲಿ ಸಕ್ಕರೆ ಉತ್ಪಾದನೆ ನಿರೀಕ್ಷೆಗಿಂತ ಕಡಿಮೆಯಾಗಿದ್ದರೂ, ದೇಶೀಯ ಬೇಡಿಕೆಯನ್ನು ಪೂರೈಸಲು ಸಾಕಷ್ಟು ಸಕ್ಕರೆ ದಾಸ್ತಾನು ಲಭ್ಯವಿದೆ ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದೆ. ಇತ್ತೀಚಿನ ವಾರಗಳಲ್ಲಿ ಸಕ್ಕರೆ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಸಮರ್ಪಕ ಪೂರೈಕೆ ಹಾಗೂ ಬೆಲೆ ಸ್ಥಿರತೆ ಕಾಪಾಡಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ಸಕ್ಕರೆ ಬೆಲೆ ಹಾಗೂ ಲಭ್ಯತೆಯ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಕಳೆದ ಕೆಲವು ವಾರಗಳಲ್ಲಿ ಸಕ್ಕರೆ ಬೆಲೆಯಲ್ಲಿ ಏರಿಕೆಯಾಗಿದ್ದು, ಕಳೆದ ತಿಂಗಳ 20ರಂದು ಕೆಜಿಗೆ ಸುಮಾರು ₹48 ಇದ್ದ ಬೆಲೆ ಆಗಸ್ಟ್ 19ರಂದು ಸುಮಾರು ₹55ಕ್ಕೆ ಏರಿಕೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಎಥನಾಲ್ ಉತ್ಪಾದನೆಗೆ ಸಕ್ಕರೆ ತಿರುಗಿಸಿದ್ದೇ ಬೆಲೆ ಏರಿಕೆಗೆ ಕಾರಣವಲ್ಲ
ಸಕ್ಕರೆ ಬೆಲೆ ಏರಿಕೆಗೆ ಎಥನಾಲ್ ಉತ್ಪಾದನೆಗಾಗಿ ಸಕ್ಕರೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿರುವುದೇ ಕಾರಣ ಎಂಬ ವಾದ ಸರಿಯಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
2022–23ರಲ್ಲಿ ಎಥನಾಲ್ ಉತ್ಪಾದನೆಗೆ ಸಕ್ಕರೆಯ ಸುಮಾರು 12 ಪ್ರತಿಶತವನ್ನು ಬಳಸಲಾಗುತ್ತಿತ್ತು. ಈ ಪ್ರಮಾಣ 2025–26ರಲ್ಲಿ ಸುಮಾರು 9 ಪ್ರತಿಶತಕ್ಕೆ ಇಳಿಕೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಉತ್ಪಾದನೆಯಾಗುತ್ತಿರುವ ಎಥನಾಲ್‌ನ ಸುಮಾರು ಮುಕ್ಕಾಲು ಭಾಗ ಇದೀಗ ಧಾನ್ಯಗಳಿಂದ, ವಿಶೇಷವಾಗಿ ಮೆಕ್ಕೆಜೋಳದಿಂದ ಉತ್ಪಾದನೆಯಾಗುತ್ತಿದೆ ಎಂದು ಸಚಿವಾಲಯ ವಿವರಿಸಿದೆ.
ಹಲವು ಕಾರಣಗಳಿಂದ ಸಕ್ಕರೆ ಬೆಲೆ ಏರಿಕೆ
ದೇಶೀಯ ಸಕ್ಕರೆ ಬೆಲೆ ಏರಿಕೆಗೆ ಹಲವು ಕಾರಣಗಳಿವೆ ಎಂದು ಸರ್ಕಾರ ತಿಳಿಸಿದೆ. ನಿರೀಕ್ಷೆಗಿಂತ ಕಡಿಮೆ ದೇಶೀಯ ಉತ್ಪಾದನೆ, ಹಬ್ಬದ ಋತುವಿನ ಮುನ್ನ ಹೆಚ್ಚುತ್ತಿರುವ ಬೇಡಿಕೆ, ಹವಾಮಾನ ವೈಪರೀತ್ಯದಿಂದ ಕಬ್ಬು ಬೆಳೆಗೆ ಉಂಟಾದ ಹಾನಿ, ಜಾಗತಿಕ ಸಕ್ಕರೆ ಪೂರೈಕೆಯಲ್ಲಿನ ಬಿಗಿತ ಹಾಗೂ ಕೆಲವರ ಊಹಾಪೋಹ ಮತ್ತು ದಾಸ್ತಾನು ಮಾಡಿಕೊಳ್ಳುವ ಪ್ರವೃತ್ತಿ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ತಿಳಿಸಿದೆ.
ಪ್ರಸ್ತುತ ಹಂಗಾಮಿನಲ್ಲಿ ಸಕ್ಕರೆ ಉತ್ಪಾದನೆ ಸುಮಾರು 306 ಲಕ್ಷ ಟನ್‌ಗಳಷ್ಟಾಗುವ ನಿರೀಕ್ಷೆಯಿದೆ. ಆದರೆ ಕಬ್ಬು ಬೆಳೆಯುವ ರಾಜ್ಯಗಳು ಆರಂಭದಲ್ಲಿ ಸುಮಾರು 343 ಲಕ್ಷ ಟನ್ ಉತ್ಪಾದನೆಯಾಗಲಿದೆ ಎಂದು ಅಂದಾಜಿಸಿದ್ದವು.
ಸಕ್ಕರೆ ದಾಸ್ತಾನಿಗೆ ಮಿತಿ
ಕೆಲವು ಸಕ್ಕರೆ ಕಾರ್ಖಾನೆಗಳು ಮತ್ತು ವ್ಯಾಪಾರಿಗಳು ಸಕ್ಕರೆಯನ್ನು ದಾಸ್ತಾನು ಮಾಡಿಕೊಳ್ಳುತ್ತಿರುವುದು ಹಾಗೂ ಊಹಾಪೋಹ ನಡೆಸುತ್ತಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಸರ್ಕಾರ ಗಮನಿಸಿದೆ.
ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಸಕ್ಕರೆ ವ್ಯಾಪಾರಿಗಳಿಗೆ ಆಗಸ್ಟ್ 1ರಿಂದ ನವೆಂಬರ್ 30ರವರೆಗೆ ಗರಿಷ್ಠ 400 ಟನ್‌ಗಳ ದಾಸ್ತಾನು ಮಿತಿ ವಿಧಿಸಲಾಗಿದೆ. ಇದರ ಜೊತೆಗೆ, ಸೆಪ್ಟೆಂಬರ್ 1ರಿಂದ ಸಗಟು ಗ್ರಾಹಕರು ತಮ್ಮ 15 ದಿನಗಳ ಬಳಕೆಗೆ ಮೀರಿದ ಸಕ್ಕರೆ ದಾಸ್ತಾನು ಇಟ್ಟುಕೊಳ್ಳಲು ಅವಕಾಶ ಇರುವುದಿಲ್ಲ ಎಂದು ಸರ್ಕಾರ ತಿಳಿಸಿದೆ.
ಅಕ್ಟೋಬರ್‌ನಿಂದ ಸಕ್ಕರೆ ಉತ್ಪಾದನೆ ಹೆಚ್ಚಳ ನಿರೀಕ್ಷೆ
ರಾಜ್ಯಗಳು ಮತ್ತು ಸಕ್ಕರೆ ಕಾರ್ಖಾನೆಗಳು ಅಕ್ಟೋಬರ್ 15ರಿಂದ ಕಬ್ಬು ಅರೆಯುವಿಕೆ (Crushing) ಆರಂಭಿಸುವಂತೆ ಸರ್ಕಾರ ಸೂಚಿಸಿದೆ.
ಇದರಿಂದ ಅಕ್ಟೋಬರ್ ತಿಂಗಳಲ್ಲಿ ಸಾಮಾನ್ಯವಾಗಿ ಉತ್ಪಾದನೆಯಾಗುವ 3–4 ಲಕ್ಷ ಮೆಟ್ರಿಕ್ ಟನ್‌ಗಳ ಬದಲಿಗೆ 10 ಲಕ್ಷ ಮೆಟ್ರಿಕ್ ಟನ್‌ಗಿಂತ ಹೆಚ್ಚು ಸಕ್ಕರೆ ಉತ್ಪಾದನೆಯಾಗುವ ನಿರೀಕ್ಷೆಯಿದೆ. ಇದರಿಂದ ಹಬ್ಬದ ಋತುವಿನಲ್ಲಿ ಸಕ್ಕರೆಯ ಲಭ್ಯತೆ ಮತ್ತಷ್ಟು ಸುಧಾರಿಸುವ ಸಾಧ್ಯತೆಯಿದೆ ಎಂದು ಸರ್ಕಾರ ತಿಳಿಸಿದೆ.


