ಕೈಮಗ್ಗದ ಹಿಂದಿನ ಸ್ಫೂರ್ತಿಯ ಮಹಿಳೆಯರಿಗೆ ಗೌರವ: ‘ಸೃಜನ’ ಕಾರ್ಯಕ್ರಮ ಆಯೋಜನೆ

1 Min Read
1 Min Read

ನವದೆಹಲಿ: ಭಾರತದ ಕೈಮಗ್ಗ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ವದ ಕೊಡುಗೆ ನೀಡುತ್ತಿರುವ ಮಹಿಳಾ ನೇಕಾರರನ್ನು ಗೌರವಿಸುವ ಉದ್ದೇಶದಿಂದ ಕೇಂದ್ರ ಜವಳಿ ಸಚಿವಾಲಯವು ‘ಸೃಜನ: ವೀವ್ಸ್ ಫ್ರಂ ದಿ ಲೂಮ್’ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಿದೆ.

ಮಹಿಳಾ ನೇಕಾರರ ಜೀವನಯಾನ, ಅವರ ಸಾಧನೆ, ಸೃಜನಶೀಲತೆ ಹಾಗೂ ಕೈಮಗ್ಗ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆಯನ್ನು ಗುರುತಿಸುವ ಈ ವಿಶೇಷ ಕಾರ್ಯಕ್ರಮ ಇಂದು ನವದೆಹಲಿಯಲ್ಲಿ ನಡೆಯಲಿದೆ.

ಕೇಂದ್ರ ಜವಳಿ ಸಚಿವಾಲಯದ ಕಾರ್ಯದರ್ಶಿ ನೀಲಂ ಶಮಿ ರಾವ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ದೇಶದ ಕೈಮಗ್ಗ ಪರಂಪರೆಯನ್ನು ಉಳಿಸುವಲ್ಲಿ ಮಹಿಳಾ ನೇಕಾರರ ಪಾತ್ರವನ್ನು ಗುರುತಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.

ಸಚಿವಾಲಯದ ಮಾಹಿತಿ ಪ್ರಕಾರ, ದೇಶದ 6 ಕೈಮಗ್ಗ ಕ್ಲಸ್ಟರ್‌ಗಳಿಂದ 100ಕ್ಕೂ ಹೆಚ್ಚು ಮಹಿಳಾ ನೇಕಾರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಜೀವನದ ಅನುಭವಗಳು, ಸವಾಲುಗಳನ್ನು ಎದುರಿಸಿ ಮುನ್ನಡೆದ ಪಯಣ, ಸೃಜನಶೀಲತೆ ಹಾಗೂ ಭಾರತದ ನೇಕಾರಿಕೆ ಪರಂಪರೆಯನ್ನು ಸಂರಕ್ಷಿಸುವಲ್ಲಿ ತಮ್ಮ ಪಾತ್ರದ ಕುರಿತು ಮಾತನಾಡಲಿದ್ದಾರೆ.

ಇದೇ ವೇಳೆ, ಈ ಮಹಿಳಾ ನೇಕಾರರ ಸ್ಫೂರ್ತಿದಾಯಕ ಕಥೆಗಳು, ಜೀವನಯಾನ ಮತ್ತು ಅನುಭವಗಳನ್ನು ಒಳಗೊಂಡ ವಿಶೇಷ ಸಂಕಲನವನ್ನು ಬಿಡುಗಡೆ ಮಾಡಲಾಗುತ್ತದೆ.

ಭಾರತದ ಶ್ರೀಮಂತ ಕೈಮಗ್ಗ ಪರಂಪರೆಯ ಸಂರಕ್ಷಣೆ ಮತ್ತು ಮುಂದಿನ ಪೀಳಿಗೆಗೆ ಅದರ ಮಹತ್ವವನ್ನು ತಲುಪಿಸುವಲ್ಲಿ ಮಹಿಳಾ ನೇಕಾರರ ಕೊಡುಗೆಯನ್ನು ಈ ಕಾರ್ಯಕ್ರಮದ ಮೂಲಕ ಮುನ್ನೆಲೆಗೆ ತರಲಾಗುತ್ತಿದೆ.

Share This Article