ನವದೆಹಲಿ: ಭಾರತದಲ್ಲಿ ಹಾಗೂ ವಿದೇಶದಲ್ಲಿರುವ ಭಾರತೀಯ ನಾಗರಿಕರಿಗೆ ಇದುವರೆಗೆ 1 ಕೋಟಿ 73 ಲಕ್ಷಕ್ಕೂ ಅಧಿಕ ಇ-ಪಾಸ್‌ಪೋರ್ಟ್‌ಗಳನ್ನು ವಿತರಿಸಲಾಗಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ಮಾಹಿತಿ ನೀಡಿದೆ.
ರಾಜ್ಯಸಭೆಯಲ್ಲಿ ಇಂದು ಲಿಖಿತ ಉತ್ತರ ನೀಡಿದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್, ದೇಶದ ಎಲ್ಲಾ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗಳು, ಪಾಸ್‌ಪೋರ್ಟ್ ಸೇವಾ ಕೇಂದ್ರಗಳು ಹಾಗೂ ಅಂಚೆ ಕಚೇರಿ ಪಾಸ್‌ಪೋರ್ಟ್ ಸೇವಾ ಕೇಂದ್ರಗಳಲ್ಲಿ ಇ-ಪಾಸ್‌ಪೋರ್ಟ್ ವಿತರಿಸಲಾಗುತ್ತಿದೆ ಎಂದು ತಿಳಿಸಿದರು. ವಿದೇಶಗಳಲ್ಲಿರುವ ಎಲ್ಲಾ ಭಾರತೀಯ ರಾಯಭಾರ ಕಚೇರಿಗಳು ಮತ್ತು ಮಿಷನ್‌ಗಳಲ್ಲಿಯೂ ಇ-ಪಾಸ್‌ಪೋರ್ಟ್ ಸೇವೆ ಲಭ್ಯವಿದೆ ಎಂದು ಹೇಳಿದರು.
ಕಳೆದ ವರ್ಷದ ಮೇ ತಿಂಗಳಲ್ಲಿ ಇ-ಪಾಸ್‌ಪೋರ್ಟ್ ವ್ಯವಸ್ಥೆಯನ್ನು ಆರಂಭಿಸಲಾಗಿತ್ತು. ಪಾಸ್‌ಪೋರ್ಟ್ ಸೇವಾ ಕಾರ್ಯಕ್ರಮದಡಿ ಸಮಗ್ರ ಡಿಜಿಟಲ್ ವೇದಿಕೆಗಳನ್ನು ಒದಗಿಸಲಾಗಿದ್ದು, ಇದರ ಭಾಗವಾಗಿ ಪಾಸ್‌ಪೋರ್ಟ್ ಸೇವಾ ಪೋರ್ಟಲ್, ಪಾಸ್‌ಪೋರ್ಟ್ ಸೇವಾ ಮೊಬೈಲ್ ಆ್ಯಪ್‌ಗಳು ಹಾಗೂ ಕೇಂದ್ರೀಕೃತ ನಾಗರಿಕ ಸೇವಾ ಕಾಲ್ ಸೆಂಟರ್ ಕಾರ್ಯನಿರ್ವಹಿಸುತ್ತಿವೆ ಎಂದು ಸಚಿವರು ತಿಳಿಸಿದರು.
ಈ ಡಿಜಿಟಲ್ ವ್ಯವಸ್ಥೆಗಳ ಮೂಲಕ ಅರ್ಜಿದಾರರು ಪಾಸ್‌ಪೋರ್ಟ್‌ಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯುವುದು, ಅರ್ಜಿಯ ಸ್ಥಿತಿಯನ್ನು ಪರಿಶೀಲಿಸುವುದು ಹಾಗೂ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರ ಪಡೆಯುವುದು ಸಾಧ್ಯವಾಗಿದೆ. ಇದಕ್ಕಾಗಿ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗಳಿಗೆ ನೇರವಾಗಿ ಭೇಟಿ ನೀಡುವ ಅಗತ್ಯವೂ ಕಡಿಮೆಯಾಗಿದೆ ಎಂದು ಕೀರ್ತಿ ವರ್ಧನ್ ಸಿಂಗ್ ಹೇಳಿದರು.
ಡಿಜಿಟಲ್ ಸೇವೆಗಳ ವಿಸ್ತರಣೆಯಿಂದ ನಾಗರಿಕರಿಗೆ ಹೆಚ್ಚಿನ ಸುಲಭತೆ, ಅನುಕೂಲತೆ ಮತ್ತು ವೇಗದ ಸೇವಾ ವಿತರಣೆಗೆ ಸಹಾಯವಾಗಿದ್ದು, ಆಡಳಿತಾತ್ಮಕ ವಿಚಾರಗಳಿಗಾಗಿ ಕಚೇರಿಗಳಿಗೆ ನೇರ ಭೇಟಿ ನೀಡುವ ಅವಶ್ಯಕತೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಸಚಿವರು ತಿಳಿಸಿದರು.


