ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜನ್ಮಸಿದ್ಧ ಪೌರತ್ವಕ್ಕೆ ನಿರ್ಬಂಧ ಹೇರುವ ಹಾಗೂ ‘ಬರ್ತ್ ಟೂರಿಸಂ’ ನಿಯಂತ್ರಿಸುವ ಉದ್ದೇಶದ ಎರಡು ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕಿದ್ದಾರೆ.
ವೈಟ್‌ಹೌಸ್‌ನಲ್ಲಿ ಮಾತನಾಡಿದ ಟ್ರಂಪ್, ಈ ಹಿಂದೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಇದು ದುರದೃಷ್ಟಕರ ನಿರ್ಧಾರ ಎಂದು ಅವರು ಹೇಳಿದ್ದು, ತಮ್ಮ ಆಡಳಿತವು ಅಮೆರಿಕದ ವಲಸೆ ವ್ಯವಸ್ಥೆಯ ದುರುಪಯೋಗದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದರು.
ವೈಟ್‌ಹೌಸ್ ಮಾಹಿತಿ ಪ್ರಕಾರ, ಮೊದಲ ಕಾರ್ಯಕಾರಿ ಆದೇಶವು ವಿದೇಶಿ ಪ್ರಜೆಗಳ ಮಕ್ಕಳಲ್ಲಿ ಯಾವ ವರ್ಗದವರಿಗೆ ಜನ್ಮಸಿದ್ಧ ಪೌರತ್ವ ಅನ್ವಯಿಸುವುದಿಲ್ಲ ಎಂಬುದನ್ನು ನಿರ್ದಿಷ್ಟಪಡಿಸುವ ಗುರಿಯನ್ನು ಹೊಂದಿದೆ. ಇದರಲ್ಲಿ ಅಮೆರಿಕದ ಸುಪ್ರೀಂ ಕೋರ್ಟ್ ಈ ಹಿಂದೆ ಗುರುತಿಸಿರುವ ಐತಿಹಾಸಿಕ ವಿನಾಯಿತಿಗಳನ್ನು ಆಧಾರವಾಗಿಟ್ಟುಕೊಳ್ಳಲಾಗಿದೆ.
ಎರಡನೇ ಆದೇಶವು ‘ಬರ್ತ್ ಟೂರಿಸಂ’ಗೆ ಕಡಿವಾಣ ಹಾಕುವಂತೆ ವಿದೇಶಾಂಗ ಇಲಾಖೆ ಹಾಗೂ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆಗೆ ನಿರ್ದೇಶನ ನೀಡುತ್ತದೆ. ವಿದೇಶಿ ಪ್ರಜೆಗಳು ತಮ್ಮ ಮಕ್ಕಳಿಗೆ ಅಮೆರಿಕದ ಪೌರತ್ವ ದೊರಕಿಸಿಕೊಡುವ ಪ್ರಮುಖ ಉದ್ದೇಶದಿಂದ ಅಮೆರಿಕಕ್ಕೆ ಪ್ರಯಾಣಿಸುವುದನ್ನು ‘ಬರ್ತ್ ಟೂರಿಸಂ’ ಎಂದು ಕರೆಯಲಾಗುತ್ತದೆ.
ಈ ಕಾರ್ಯಕಾರಿ ಕ್ರಮಗಳು ಅಮೆರಿಕ ಸುಪ್ರೀಂ ಕೋರ್ಟ್‌ನ ಜೂನ್ ತಿಂಗಳ ತೀರ್ಪಿನ ಕೆಲ ವಾರಗಳ ಬಳಿಕ ಬಂದಿವೆ. ಅಮೆರಿಕದಲ್ಲಿ ಜನಿಸಿದ ಮಕ್ಕಳ ಪೋಷಕರು ಅಕ್ರಮವಾಗಿ ಅಥವಾ ತಾತ್ಕಾಲಿಕವಾಗಿ ದೇಶದಲ್ಲಿ ನೆಲೆಸಿದ್ದರೂ, 14ನೇ ತಿದ್ದುಪಡಿಯ ಪೌರತ್ವ ವಿಧಿಯಡಿ ಆ ಮಕ್ಕಳಿಗೆ ಸ್ವಯಂಚಾಲಿತ ಅಮೆರಿಕನ್ ಪೌರತ್ವ ದೊರೆಯುತ್ತದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.
ಟ್ರಂಪ್ ಆಡಳಿತದ ಹೊಸ ಆದೇಶಗಳು ಅಮೆರಿಕದ ಜನ್ಮಸಿದ್ಧ ಪೌರತ್ವ ನೀತಿ ಹಾಗೂ ವಲಸೆ ವ್ಯವಸ್ಥೆಯ ಕುರಿತು ಮತ್ತೊಮ್ಮೆ ವ್ಯಾಪಕ ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.


