ನವದೆಹಲಿ: ಸಿಲ್ಕ್ಯಾರಾ ಸುರಂಗ ರಕ್ಷಣಾ ಕಾರ್ಯಾಚರಣೆಯಲ್ಲಿ ಅಸಾಧಾರಣ ಧೈರ್ಯ ಮತ್ತು ನಿಸ್ವಾರ್ಥ ಸೇವೆ ಸಲ್ಲಿಸಿದ 12 ‘ರ್ಯಾಟ್ ಮೈನರ್’ಗಳಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ‘ಸರ್ವೋತ್ತಮ ಜೀವ ರಕ್ಷಾ ಪದಕ’ ಪ್ರದಾನ ಮಾಡಿದರು.
ನವದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಗೌರವವನ್ನು ರ್ಯಾಟ್ ಮೈನರ್‌ಗಳಿಗೆ ನೀಡಲಾಯಿತು. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ರಾಜ್ಯ ಸಚಿವ ಹರ್ಷ್ ಮಲ್ಹೋತ್ರಾ ಸೇರಿದಂತೆ ಸಚಿವಾಲಯದ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಮಾತನಾಡಿದ ನಿತಿನ್ ಗಡ್ಕರಿ, ಸಿಲ್ಕ್ಯಾರಾ ಸುರಂಗ ಕುಸಿತವು ಇತ್ತೀಚಿನ ವರ್ಷಗಳಲ್ಲಿ ನಡೆದ ಅತ್ಯಂತ ಸವಾಲಿನ ರಕ್ಷಣಾ ಕಾರ್ಯಾಚರಣೆಗಳಲ್ಲಿ ಒಂದಾಗಿತ್ತು ಎಂದು ಹೇಳಿದರು.
ಸುರಂಗದಲ್ಲಿ ಕಾರ್ಮಿಕರು ಸಿಲುಕಿಕೊಂಡಿದ್ದ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಯ ಪ್ರತಿಯೊಂದು ಬೆಳವಣಿಗೆಯನ್ನೂ ಪ್ರಧಾನಿ ನರೇಂದ್ರ ಮೋದಿ ಅವರು ನಿಕಟವಾಗಿ ಮೇಲ್ವಿಚಾರಣೆ ಮಾಡಿದ್ದರು. ಸಿಲುಕಿದ್ದ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರಲು ಅಗತ್ಯವಿರುವ ಎಲ್ಲ ಸಂಪನ್ಮೂಲಗಳನ್ನು ಬಳಸಿಕೊಳ್ಳುವಂತೆ ಕ್ರಮ ಕೈಗೊಳ್ಳಲಾಗಿತ್ತು ಎಂದು ಗಡ್ಕರಿ ತಿಳಿಸಿದರು.
ಸಂಕಷ್ಟದ ಸಂದರ್ಭದಲ್ಲಿ ಜೀವ ರಕ್ಷಿಸುವ ಕಾರ್ಯಕ್ಕೆ ಮುಂದಾದ ರ್ಯಾಟ್ ಮೈನರ್‌ಗಳ ಅಸಾಧಾರಣ ಧೈರ್ಯ, ನಿಸ್ವಾರ್ಥ ಸೇವೆ ಹಾಗೂ ಮಾನವ ಜೀವ ಉಳಿಸುವ ಬದ್ಧತೆ ಶ್ಲಾಘನೀಯವಾಗಿದೆ ಎಂದು ಗಡ್ಕರಿ ಹೇಳಿದರು.
ಅವರ ಸಾಹಸ ಮತ್ತು ಸೇವೆಯನ್ನು ಗುರುತಿಸಿ ನೀಡಲಾಗಿರುವ ‘ಸರ್ವೋತ್ತಮ ಜೀವ ರಕ್ಷಾ ಪದಕ’ ಅತ್ಯಂತ ಸೂಕ್ತ ಗೌರವವಾಗಿದೆ ಎಂದು ಸಚಿವರು ತಿಳಿಸಿದರು.
ಸಿಲ್ಕ್ಯಾರಾ ಸುರಂಗ ರಕ್ಷಣಾ ಕಾರ್ಯಾಚರಣೆಯ ವೇಳೆ ತಮ್ಮ ಜೀವದ ಹಂಗು ತೊರೆದು ಕಾರ್ಯನಿರ್ವಹಿಸಿದ ರ್ಯಾಟ್ ಮೈನರ್‌ಗಳ ಪಾತ್ರ ದೇಶದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿತ್ತು.


