ಕಾಶ್ಮೀರದಲ್ಲಿ ಜೆಹ್ಲಂ ನದಿ ನೀರಿನ ಮಟ್ಟ ಏರಿಕೆ; ಜನರಿಗೆ ಎಚ್ಚರಿಕೆ, ಅಮರನಾಥ ಯಾತ್ರೆ ಮತ್ತೆ ಸ್ಥಗಿತ

1 Min Read
1 Min Read

ಶ್ರೀನಗರ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯ ಪರಿಣಾಮ ಕಾಶ್ಮೀರ ಕಣಿವೆಯ ಜೆಹ್ಲಂ ನದಿಯ ನೀರಿನ ಮಟ್ಟ ಹಲವು ಪ್ರದೇಶಗಳಲ್ಲಿ ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ನದಿಯ ದಂಡೆ ಸಮೀಪ ವಾಸಿಸುವ ನಿವಾಸಿಗಳು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಆಡಳಿತ ಸೂಚಿಸಿದೆ.

ಕಾಶ್ಮೀರ ವಿಭಾಗದ ಆಯುಕ್ತರು, ಜನರು ಆತಂಕಕ್ಕೆ ಒಳಗಾಗದೆ ಅಧಿಕೃತ ಸೂಚನೆಗಳನ್ನು ಪಾಲಿಸಬೇಕು ಹಾಗೂ ನದಿ ತೀರದ ಪ್ರದೇಶಗಳಲ್ಲಿ ಜಾಗರೂಕರಾಗಿರಬೇಕು ಎಂದು ಮನವಿ ಮಾಡಿದ್ದಾರೆ.

ಇದೇ ವೇಳೆ, ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಇಲಾಖೆ ತನ್ನ ಸಿಬ್ಬಂದಿಗೆ ಕರ್ತವ್ಯ ಸ್ಥಳಗಳಲ್ಲೇ ನಿಯೋಜಿತರಾಗಿ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವಂತೆ ಸೂಚಿಸಿದೆ. ನದಿಗಳು, ಹಳ್ಳಗಳು ಹಾಗೂ ಇತರ ಜಲಮೂಲಗಳ ದಂಡೆಗಳ ಬಳಿ ಸಾರ್ವಜನಿಕರು ತೆರಳದಂತೆ ಎಚ್ಚರಿಕೆ ನೀಡಲಾಗಿದೆ.

ಮತ್ತೊಂದೆಡೆ, ಪ್ರತಿಕೂಲ ಹವಾಮಾನದ ಕಾರಣ ಶ್ರೀ ಅಮರನಾಥ ಯಾತ್ರೆ ಸತತ ಆರನೇ ದಿನವೂ ಸ್ಥಗಿತಗೊಂಡಿದೆ. ಭೂಕುಸಿತ ಮತ್ತು ಗುಡ್ಡ ಕುಸಿತದ ಪರಿಣಾಮ ಜಮ್ಮು–ಶ್ರೀನಗರ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್-44) ಸಂಚಾರಕ್ಕೂ ಬಂದ್ ಆಗಿದೆ.

ಹೆದ್ದಾರಿ ದುರಸ್ತಿ ಕಾರ್ಯ ಮುಂದುವರಿದಿರುವ ಹಿನ್ನೆಲೆಯಲ್ಲಿ, ಸಿಲುಕಿರುವ ಶ್ರೀ ಅಮರನಾಥ ಯಾತ್ರಿಕರು, ಪ್ರವಾಸಿಗರು ಹಾಗೂ ಇತರ ಪ್ರಯಾಣಿಕರ ಅನುಕೂಲಕ್ಕಾಗಿ ಉತ್ತರ ರೈಲ್ವೆ ಬುದ್ಗಾಂನಿಂದ ಕತ್ರಾವರೆಗೆ ವಿಶೇಷ ರೈಲು ಸೇವೆಯನ್ನು ಆರಂಭಿಸಿದೆ.

Share This Article