ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ನವಿ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ‘ಭಾರತ್ ಟ್ಯಾಕ್ಸಿ’ (BHARAT TAXI) ಸೇವೆಗೆ ಅಧಿಕೃತ ಚಾಲನೆ ನೀಡಿದರು. ಈ ಸೇವೆಯನ್ನು ಪಾರದರ್ಶಕ, ಕೈಗೆಟುಕುವ ದರದ ಹಾಗೂ ಚಾಲಕ ಸ್ನೇಹಿ ಟ್ಯಾಕ್ಸಿ ವ್ಯವಸ್ಥೆಯಾಗಿ ಅವರು ಬಣ್ಣಿಸಿದರು.
ಕೇಂದ್ರ ಸರ್ಕಾರ ಮತ್ತು ಮಹಾರಾಷ್ಟ್ರ ಸರ್ಕಾರದ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಹಕಾರ ಮತ್ತು ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳೀಧರ್ ಮೊಹೋಲ್, ಮಹಾರಾಷ್ಟ್ರ ಸಹಕಾರ ಸಚಿವ ಬಾಬಾಸಾಹೇಬ್ ಪಾಟೀಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಫಡಣವೀಸ್, ಓಲಾ ಮತ್ತು ಉಬರ್ ಮಾದರಿಯ ಸೇವೆಗಳು ನಗರ ಸಾರಿಗೆಯಲ್ಲಿ ಮಹತ್ವದ ಬದಲಾವಣೆ ತಂದಿದ್ದರೂ, ಹಬ್ಬಗಳು ಹಾಗೂ ಪ್ರತಿಕೂಲ ಹವಾಮಾನದ ಸಂದರ್ಭಗಳಲ್ಲಿ ಡೈನಾಮಿಕ್ ಪ್ರೈಸಿಂಗ್ ಕಾರಣ ಪ್ರಯಾಣಿಕರು ಹೆಚ್ಚಿನ ದರ ಪಾವತಿಸಬೇಕಾಗುತ್ತದೆ. ಅಲ್ಲದೆ, ಚಾಲಕರು ಹೆಚ್ಚಿನ ಪ್ರಮಾಣದ ಕಮಿಷನ್ ನೀಡಬೇಕಾಗುತ್ತದೆ ಎಂದು ಹೇಳಿದರು.
ಈ ಸಮಸ್ಯೆಗಳಿಗೆ ಪರಿಹಾರವಾಗಿ ‘ಭಾರತ್ ಟ್ಯಾಕ್ಸಿ’ ಸಹಕಾರ ಮಾದರಿಯಲ್ಲಿ ಪ್ರಯಾಣಿಕರನ್ನು ನೇರವಾಗಿ ಚಾಲಕರೊಂದಿಗೆ ಸಂಪರ್ಕಿಸುತ್ತದೆ. ಇದರಿಂದ ಮಧ್ಯವರ್ತಿಗಳ ಪಾತ್ರವೇ ಇಲ್ಲದಂತಾಗುತ್ತದೆ ಎಂದು ಅವರು ತಿಳಿಸಿದರು.
ಈ ಸೇವೆಯು ಒಂದೇ ಮೊಬೈಲ್ ಆ್ಯಪ್ ಮೂಲಕ ಕಾರು, ಆಟೋ ರಿಕ್ಷಾ ಹಾಗೂ ಬೈಕ್ ಟ್ಯಾಕ್ಸಿ ಸೇವೆಗಳನ್ನು ಒದಗಿಸುತ್ತದೆ. ಮುಂಬೈನ ಸಾಂಪ್ರದಾಯಿಕ ಕಪ್ಪು-ಹಳದಿ ಟ್ಯಾಕ್ಸಿ ದರ ವ್ಯವಸ್ಥೆಯ ಮಾದರಿಯಲ್ಲೇ ಶುಲ್ಕ ನಿಗದಿಪಡಿಸಲಾಗಿದ್ದು, ಮೊದಲ 1.5 ಕಿಲೋಮೀಟರ್‌ಗೆ ₹31 ಹಾಗೂ ನಂತರದ ಪ್ರತಿ ಕಿಲೋಮೀಟರ್‌ಗೆ ₹21 ದರ ವಿಧಿಸಲಾಗುತ್ತದೆ ಎಂದು ಫಡಣವೀಸ್ ತಿಳಿಸಿದರು.
ಕೇಂದ್ರ ಸಚಿವ ಮುರಳೀಧರ್ ಮೊಹೋಲ್ ಮಾತನಾಡಿ, ಈ ಸಹಕಾರ ಮಾದರಿಯು ಚಾಲಕರನ್ನು ಕೇವಲ ಉದ್ಯೋಗಿಗಳಿಂದ ಸಂಸ್ಥೆಯ ಸದಸ್ಯರು ಮತ್ತು ಸಹ-ಮಾಲೀಕರನ್ನಾಗಿ ಪರಿವರ್ತಿಸುತ್ತದೆ. ಇದರಿಂದ ಸಂಸ್ಥೆಯ ಲಾಭಾಂಶದಲ್ಲಿ ಚಾಲಕರಿಗೂ ಪಾಲು ಸಿಗಲಿದೆ ಎಂದು ಹೇಳಿದರು.
ದೇಶಾದ್ಯಂತ ಈಗಾಗಲೇ ಸುಮಾರು 8 ಲಕ್ಷ ಚಾಲಕರು ಈ ಸಹಕಾರ ಸಂಘಕ್ಕೆ ಸೇರ್ಪಡೆಯಾಗಿದ್ದು, ಯಾವುದೇ ಕಮಿಷನ್ ಕಡಿತವಿಲ್ಲದೆ ₹77 ಕೋಟಿ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.


