ಸಿಕ್ಕಿಂನ ನಾಮ್ಚಿ ಜಿಲ್ಲೆಯ ಸಮರ್ಡುಂಗ್ (Samardung) ಪ್ರದೇಶದಲ್ಲಿರುವ ಎನ್ಎಚ್ಪಿಸಿ (NHPC) ಟೀಸ್ತಾ ಹಂತ-6 ಜಲವಿದ್ಯುತ್ ಯೋಜನೆಯ ನಿರ್ಮಾಣ ಹಂತದ ಸುರಂಗ ಕುಸಿತ ಪ್ರಕರಣದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಇದುವರೆಗೆ 8 ಮೃತದೇಹಗಳನ್ನು ರಕ್ಷಣಾ ತಂಡಗಳು ಹೊರತೆಗೆದಿವೆ.
ಜಿಲ್ಲೆಯ ಹಿರಿಯ ಪೊಲೀಸ್ ಅಧೀಕ್ಷಕರ (SSP) ಮಾಹಿತಿ ಪ್ರಕಾರ, ಭೂಕುಸಿತದಿಂದ ಸುರಂಗ ಕುಸಿದಿರುವ ಶಂಕೆ ವ್ಯಕ್ತವಾಗಿದ್ದು, ಕನಿಷ್ಠ 25 ಮಂದಿ ಸುರಂಗದೊಳಗೆ ಸಿಲುಕಿರುವ ಸಾಧ್ಯತೆ ಇದೆ.
ಪತ್ತೆಯಾದ ಮೃತದೇಹಗಳನ್ನು ಸಿಂಗ್ತಾಮ್ ಜಿಲ್ಲಾ ಆಸ್ಪತ್ರೆ, ಗ್ಯಾಂಗ್ಟಾಕ್ನ ಎಸ್ಟಿಎನ್ಎಂ ಆಸ್ಪತ್ರೆ ಹಾಗೂ ನಾಮ್ಚಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ನಾಮ್ಚಿ ಜಿಲ್ಲಾಡಳಿತದ ನೇತೃತ್ವದಲ್ಲಿ ಎನ್ಎಚ್ಪಿಸಿ ಅಧಿಕಾರಿಗಳು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF), ಸಿಕ್ಕಿಂ ಪೊಲೀಸ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಸಮನ್ವಯದಿಂದ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.
ನಿನ್ನೆ ದಕ್ಷಿಣ ಸಿಕ್ಕಿಂನ ಸಮರ್ಡುಂಗ್ನಲ್ಲಿರುವ ಎನ್ಎಚ್ಪಿಸಿ ಯೋಜನಾ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿತ್ತು. ಆರಂಭದಲ್ಲಿ ಸುರಂಗದೊಳಗೆ ಅನಿಲ ಸೋರಿಕೆ (Gas Leakage) ಉಂಟಾಗಿದ್ದರಿಂದ ರಕ್ಷಣಾ ಸಿಬ್ಬಂದಿಗೆ ಸ್ಥಳ ತಲುಪಲು ಸಾಧ್ಯವಾಗಿರಲಿಲ್ಲ.
ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಬಳಿಕ ವಿವಿಧ ತಂಡಗಳ ಜಂಟಿ ಕಾರ್ಯಾಚರಣೆಯಿಂದ 8 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಸುರಂಗದೊಳಗೆ ಕಾರ್ಮಿಕರು, ಎನ್ಎಚ್ಪಿಸಿ ಅಧಿಕಾರಿಗಳು ಹಾಗೂ ಖಾಸಗಿ ಎಂಜಿನಿಯರಿಂಗ್ ಸಂಸ್ಥೆಯ ಸಿಬ್ಬಂದಿ ಸಿಲುಕಿರುವ ಶಂಕೆ ಇದ್ದು, ಉಳಿದವರನ್ನು ಸುರಕ್ಷಿತವಾಗಿ ರಕ್ಷಿಸಲು ಕಾರ್ಯಾಚರಣೆ ಯುದ್ಧೋಪಾದಿಯಲ್ಲಿ ಮುಂದುವರಿದಿದೆ.


