ಕನ್ನಡದ ‘ಓಂ’ ಚಿತ್ರಕ್ಕೆ ಪೃಥ್ವಿರಾಜ್ ಸಲಾಂ: ಶಿವಣ್ಣ ಅಭಿನಯ, ಉಪೇಂದ್ರ ನಿರ್ದೇಶನಕ್ಕೆ ಶ್ಲಾಘನೆ

1 Min Read
1 Min Read

ಚೆನ್ನೈ: ಮಲಯಾಳಂ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಮತ್ತೊಮ್ಮೆ ಕನ್ನಡ ಸಿನಿಮಾದ ಮೇಲಿನ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಶಿವರಾಜ್‌ಕುಮಾರ್ ಮತ್ತು ಉಪೇಂದ್ರ ಕಾಂಬಿನೇಷನ್‌ನಲ್ಲಿ ಮೂಡಿಬಂದ ಕಲ್ಟ್ ಕ್ಲಾಸಿಕ್ ‘ಓಂ’ ಚಿತ್ರವು ತಮ್ಮ ಸಾರ್ವಕಾಲಿಕ ನೆಚ್ಚಿನ ಸಿನಿಮಾಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದ್ದಾರೆ.

ತಮ್ಮ ಹೊಸ ಸಿನಿಮಾ ‘ಖಲೀಫಾ’ (Khalifa) ಪ್ರಚಾರದ ವೇಳೆ ನೀಡಿದ ಸಂದರ್ಶನದಲ್ಲಿ ಭಾರತದ ವಿವಿಧ ಭಾಷೆಗಳ ತಮ್ಮ ನೆಚ್ಚಿನ ಸಿನಿಮಾಗಳ ಬಗ್ಗೆ ಮಾತನಾಡಿದ ಪೃಥ್ವಿರಾಜ್, ಕನ್ನಡ ಚಿತ್ರರಂಗದ ಬಗ್ಗೆ ಕೇಳಿದ ಪ್ರಶ್ನೆಗೆ ಯಾವುದೇ ಹಿಂಜರಿಕೆಯಿಲ್ಲದೆ ‘ಓಂ’ ಚಿತ್ರದ ಹೆಸರನ್ನು ಉಲ್ಲೇಖಿಸಿದರು.

“ಓಂ ನನ್ನ ಅತ್ಯಂತ ಇಷ್ಟದ ಕನ್ನಡ ಸಿನಿಮಾಗಳಲ್ಲಿ ಒಂದು. ಉಪೇಂದ್ರ ಅವರು ಚಿತ್ರವನ್ನು ಬರೆದಿರುವ ಮತ್ತು ನಿರ್ದೇಶಿಸಿರುವ ರೀತಿ ಅದ್ಭುತವಾಗಿದೆ. ಶಿವರಾಜ್‌ಕುಮಾರ್ ಅವರ ಅಭಿನಯ ಮರೆಯಲಾಗದಂತಹದ್ದು. ಅದಕ್ಕಾಗಿಯೇ ‘ಓಂ’ ನನ್ನ ಸಾರ್ವಕಾಲಿಕ ನೆಚ್ಚಿನ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ,” ಎಂದು ಪೃಥ್ವಿರಾಜ್ ಹೇಳಿದ್ದಾರೆ.

1995ರಲ್ಲಿ ಬಿಡುಗಡೆಯಾದ ‘ಓಂ’ ಚಿತ್ರವು ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ಗ್ಯಾಂಗ್‌ಸ್ಟರ್ ಸಿನಿಮಾಗಳಲ್ಲಿ ಒಂದಾಗಿದ್ದು, ಇಂದಿಗೂ ಕಲ್ಟ್ ಕ್ಲಾಸಿಕ್ ಸ್ಥಾನವನ್ನು ಉಳಿಸಿಕೊಂಡಿದೆ.

ಸಂದರ್ಶನದಲ್ಲಿ ಇತರೆ ಭಾಷೆಗಳ ತಮ್ಮ ನೆಚ್ಚಿನ ಸಿನಿಮಾಗಳನ್ನೂ ಪೃಥ್ವಿರಾಜ್ ಹಂಚಿಕೊಂಡಿದ್ದಾರೆ. ಹಿಂದಿಯಲ್ಲಿ ‘ದೀವಾರ್’, ತೆಲುಗಿನಲ್ಲಿ ‘ಬಾಹುಬಲಿ’, ತಮಿಳಿನಲ್ಲಿ ಕಮಲ್ ಹಾಸನ್ ಮತ್ತು ಶಿವಾಜಿ ಗಣೇಶನ್ ಅಭಿನಯದ ‘ತೇವರ್ ಮಗನ್’, ಹಾಗೂ ಮಲಯಾಳಂನಲ್ಲಿ ಮಮ್ಮೂಟ್ಟಿ ಅಭಿನಯದ ‘ಭೂತಕ್ಕಣ್ಣಾಡಿ’ ತಮ್ಮ ನೆಚ್ಚಿನ ಚಿತ್ರಗಳು ಎಂದು ತಿಳಿಸಿದ್ದಾರೆ.

Share This Article