‘ಪ್ರಗತಿ’ ಯೋಜನೆಗೆ ಚಾಲನೆ: 20 ಲಕ್ಷ ರೈತರು, 20 ಸಾವಿರ ಕೃಷಿ ಉದ್ಯಮಿಗಳಿಗೆ ನೆರವು
ನವದೆಹಲಿ: ಕೃಷಿ ಕ್ಷೇತ್ರದಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಿ ರೈತರ ಆದಾಯ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ‘ಪ್ರಗತಿ’ (Pragati) ಯೋಜನೆಗೆ ಚಾಲನೆ ನೀಡಿದೆ. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಇಂದು ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಉದ್ಘಾಟಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 20 ಸಾವಿರಕ್ಕೂ ಹೆಚ್ಚು ಕೃಷಿ ಉದ್ಯಮಿಗಳು ಹಾಗೂ ಸುಮಾರು 20 ಲಕ್ಷ ರೈತರಿಗೆ ಈ ಯೋಜನೆಯ ಮೂಲಕ ನೇರ ಪ್ರಯೋಜನ ದೊರೆಯಲಿದೆ ಎಂದು ತಿಳಿಸಿದರು.
ವಿಕಸಿತ ಭಾರತ ನಿರ್ಮಾಣದ ಗುರಿ ಸಾಧಿಸಲು ಅಭಿವೃದ್ಧಿ ಹೊಂದಿದ ಕೃಷಿ, ಸಮೃದ್ಧ ಗ್ರಾಮಗಳು ಮತ್ತು ಆರ್ಥಿಕವಾಗಿ ಸದೃಢ ರೈತರು ಅತ್ಯಗತ್ಯ ಎಂದು ಚೌಹಾಣ್ ಹೇಳಿದರು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, ಸರ್ಕಾರದ ಪ್ರಯತ್ನಗಳಿಗೆ ವಿವಿಧ ಸಂಸ್ಥೆಗಳು ಕೈಜೋಡಿಸಿದರೆ ಅಭಿವೃದ್ಧಿಯ ವೇಗ ಮತ್ತಷ್ಟು ಹೆಚ್ಚಲಿದೆ ಎಂದು ಅಭಿಪ್ರಾಯಪಟ್ಟರು.
‘ಪ್ರಗತಿ’ ಯೋಜನೆಯಡಿ 26 ಸಾವಿರ ಸಣ್ಣ ಕೃಷಿ ಉದ್ಯಮಿಗಳಿಗೆ ವಿಶೇಷ ತರಬೇತಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಸಚಿವರು ಮಾಹಿತಿ ನೀಡಿದರು.
ಈ ತರಬೇತಿ ಪಡೆದ ಕೃಷಿ ಉದ್ಯಮಿಗಳು ತಮ್ಮ ಗ್ರಾಮಗಳಲ್ಲೇ ಕಾರ್ಯನಿರ್ವಹಿಸಿ, 100ರಿಂದ 200 ರೈತರೊಂದಿಗೆ ನೇರವಾಗಿ ಕೈಜೋಡಿಸಿ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ, ಉತ್ಪಾದಕತೆ ಹೆಚ್ಚಳ ಹಾಗೂ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಮೂಲಕ ಗ್ರಾಮೀಣ ಕೃಷಿ ವ್ಯವಸ್ಥೆಯಲ್ಲಿ ಪರಿವರ್ತನೆ ತರಲಿದ್ದಾರೆ ಎಂದು ಅವರು ತಿಳಿಸಿದರು.
ಕೃಷಿ ಕ್ಷೇತ್ರದಲ್ಲಿ ನವೀನತೆ, ಉದ್ಯಮಶೀಲತೆ ಮತ್ತು ರೈತರ ಸಬಲೀಕರಣಕ್ಕೆ ‘ಪ್ರಗತಿ’ ಯೋಜನೆ ಹೊಸ ಮೈಲಿಗಲ್ಲಾಗಲಿದೆ ಎಂಬ ವಿಶ್ವಾಸವನ್ನು ಕೇಂದ್ರ ಸರ್ಕಾರ ವ್ಯಕ್ತಪಡಿಸಿದೆ.


