‘ಟಾಕ್ಸಿಕ್’ ಸಹನಟಿ ಹೂಮಾ ಖುರೇಷಿಗೆ ಯಶ್ ಮೆಚ್ಚುಗೆ; ‘ಬೇಬಿ ಡು ಡೈ ಡು’ ಚಿತ್ರಕ್ಕೆ ಅಭಿನಂದನೆ

1 Min Read
1 Min Read

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ತಮ್ಮ ಮುಂಬರುವ ‘ಟಾಕ್ಸಿಕ್’ ಚಿತ್ರದ ಸಹನಟಿ ಹೂಮಾ ಖುರೇಷಿ ಅವರ ಹೊಸ ಹಿಂದಿ ಸಿನಿಮಾ ‘ಬೇಬಿ ಡು ಡೈ ಡು’ (Baby Do Die Do) ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಇತ್ತೀಚೆಗೆ ತೆರೆಕಂಡಿರುವ ಈ ಕ್ರೈಮ್ ಥ್ರಿಲ್ಲರ್ ಚಿತ್ರದಲ್ಲಿ ಹೂಮಾ ಖುರೇಷಿ ನಟಿಸುವುದರ ಜೊತೆಗೆ, ತಮ್ಮ ಸಹೋದರ ಸಾಕಿಬ್ ಸಲೀಂ ಅವರೊಂದಿಗೆ ‘ಸಲೀಂ ಸಿಬ್ಲಿಂಗ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಪಕಿಯಾಗಿಯೂ ಜವಾಬ್ದಾರಿ ನಿರ್ವಹಿಸಿದ್ದಾರೆ. ನಚಿಕೇತ್ ಸಾಮಂತ್ ನಿರ್ದೇಶಿಸಿರುವ ಈ ಚಿತ್ರಕ್ಕೆ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹೂಮಾ ಖುರೇಷಿಗೆ ಅಭಿನಂದನೆ ಸಲ್ಲಿಸಿರುವ ಯಶ್, “ಯಶಸ್ಸಿಗೆ ಸುಲಭ ದಾರಿಯೂ ಇದೆ. ಆದರೆ ಹೂಮಾ ಖುರೇಷಿ ಕಠಿಣ ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ” ಎಂದು ಬರೆದಿದ್ದಾರೆ.

ಚಿತ್ರ ನಿರ್ಮಾಣ ಎನ್ನುವುದು ಕೇವಲ ಗ್ಲಾಮರ್ ಅಲ್ಲ. ಅದು ಬಜೆಟ್‌ಗಳ ಒತ್ತಡ, ಕಥೆಯ ಮೇಲಿನ ನಂಬಿಕೆ, ಸವಾಲುಗಳನ್ನು ಎದುರಿಸುವ ಜವಾಬ್ದಾರಿಯ ಕೆಲಸ ಎಂದು ಯಶ್ ಅಭಿಪ್ರಾಯಪಟ್ಟಿದ್ದಾರೆ.

“‘ಬೇಬಿ ಡು ಡೈ ಡು’ ಇಂದು ಬಿಡುಗಡೆಯಾಗಿದೆ. ನಟಿಯಾಗಿ ಮಾತ್ರವಲ್ಲ, ನಿರ್ಮಾಪಕಿಯಾಗಿಯೂ ಹೂಮಾ ಈ ಚಿತ್ರವನ್ನು ಯಶಸ್ವಿಯಾಗಿ ರೂಪಿಸಿದ್ದಾರೆ. ಇಂತಹ ಧೈರ್ಯ ಮತ್ತು ಸಮರ್ಪಣೆ ನಿಜಕ್ಕೂ ಶ್ಲಾಘನೀಯ. ‘ಹೆಮ್ಮೆ’ ಎನ್ನುವ ಒಂದು ಪದ ಸಾಕಾಗುವುದಿಲ್ಲ” ಎಂದು ಯಶ್ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

‘ಬೇಬಿ ಡು ಡೈ ಡು’ ಚಿತ್ರದಲ್ಲಿ ಸಿಕಂದರ್ ಖೇರ್, ಚಂಕಿ ಪಾಂಡೆ, ಸೀಮಾ ಪಾಹ್ವಾ, ರಚಿತ್ ಸಿಂಗ್, ವಿದ್ಯಾ ಮಲವಾಡೆ, ಹಿಮಾಂಶು ಮಲಿಕ್, ಮರುಧರ್ ಶೇಖಾವತ್ ಹಾಗೂ ಅರುಣ್ ಕುಶ್ವಾಹ್ ಸೇರಿದಂತೆ ಹಲವರು ನಟಿಸಿದ್ದಾರೆ.

ಇನ್ನೊಂದೆಡೆ, ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಇದೇ ಆಗಸ್ಟ್ 26ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ.

Share This Article